ADVERTISEMENT

ಲೇಸರ್‌ ಭೌತಶಾಸ್ತ್ರದ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್‌

ಏಜೆನ್ಸೀಸ್
Published 2 ಅಕ್ಟೋಬರ್ 2018, 13:11 IST
Last Updated 2 ಅಕ್ಟೋಬರ್ 2018, 13:11 IST
   

ಸ್ಟಾಕ್‌ಹೋಮ್ : ಲೇಸರ್ ಭೌತಶಾಸ್ತ್ರಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಮೂವರು ವಿಜ್ಞಾನಿಗಳನ್ನು 2018ರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಣ್ಣಿನ ಶಸ್ತ್ರಚಿಕಿತ್ಸೆ ಹಾಗೂ ಉದ್ಯಮದಲ್ಲಿ ಬಳಸುವ ಸುಧಾರಿತ ಸಾಧನಗಳ ಅಭಿವೃದ್ಧಿಗೆ ಈ ಸಂಶೋಧನೆಗಳು ದಾರಿ ಮಾಡಿಕೊಟ್ಟಿವೆ.

ಅಮೆರಿಕದ ಅರ್ಥರ್ ಆಸ್ಕಿನ್‌, ಫ್ರಾನ್ಸ್‌ನ ಗೆರಾರ್ಡ್‌ ಮೌರೌ ಮತ್ತು ಕೆನಾಡದ ಡೊನ್ನಾಸ್ಟೀಕ್‌ಲ್ಯಾಂಡ್‌ 2018ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ‍ಪಡೆದಿದ್ದಾರೆ.ಆರ್ಥರ್ ಅಸ್ಕಿನ್ ಅವರು ಪ್ರಶಸ್ತಿ ಮೊತ್ತದ ಅರ್ಧದಷ್ಟು ಪಡೆಯಲಿದ್ದರೆ,ಗೆರಾರ್ಡ್ ಮೌರೌ ಹಾಗೂ ಡೊನ್ನಾ ಸ್ಟ್ರಿಕ್‌ಲ್ಯಾಂಡ್ ಅವರು ಉಳಿದರ್ಧವನ್ನು ಹಂಚಿಕೊಳ್ಳಲಿದ್ದಾರೆ.

ಅಸ್ಕಿನ್ (96) ಅವರು ‘ಆಪ್ಟಿಕಲ್ ಟ್ವೀಜರ್ಸ್‌’ ಎಂಬ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ತನ್ನ ಲೇಸರ್ ಕಿರಣಗಗಳ ಮೂಲಕ ಕಣಗಳು, ಪರಮಾಣುಗಳು, ವೈರಸ್ ಹಾಗೂ ಜೀವಕೋಶಗಳನ್ನು ಹಿಡಿದುಕೊಳ್ಳುತ್ತದೆ.

ADVERTISEMENT

ಭೌತಿಕ ವಸ್ತುವೊಂದರ ಮೂಲಕ ಹಾದುಹೋಗುವ ಸಲುವಾಗಿ ಬೆಳಕಿನ ವಿಕಿರಣದ ಒತ್ತಡವನ್ನು ಬಳಸಿಕೊಳ್ಳಲು ಇದರಿಂದ ಅಸ್ಕಿನ್ ಅವರಿಗೆ ಸಾಧ್ಯವಾಗಿದೆ ಎಂದು ಪ್ರಶಸ್ತಿ ನೀಡುವ ರಾಯಲ್ ಸ್ವೀಡಿಷ್ ಸೈನ್ಸ್ ಅಕಾಡೆಮಿ ತಿಳಿಸಿದೆ. ಈ ವಿಚಾರದಲ್ಲಿ 1987ರಲ್ಲೇ ಅಸ್ಕಿನ್ ಅವರು ಯಶಸ್ಸು ಸಾಧಿಸಿದ್ದರು. ಟ್ವೀಜರ್ಸ್ ಬಳಸಿಕೊಂಡು, ಬ್ಯಾಕ್ಟಿರಿಯಾವೊಂದನ್ನು ಅದಕ್ಕೆ ಹಾನಿ ಮಾಡದಂತೆ ಸೆರೆಹಿಡಿಯುವ ವಿಧಾನವನ್ನು ಅವರು ಕಂಡು ಹಿಡಿದಿದ್ದರು.

ಅತಿಚಿಕ್ಕ ಹಾಗೂ ಸೂಕ್ಷ್ಮವೆನಿಸುವ ಲೇಸರ್ ಕಂಪನಗಳನ್ನು ಸೃಷ್ಟಿಮಾಡುವ ವಿಧಾನವನ್ನು ಮೌರೌ ಹಾಗೂ ಸ್ಟ್ರಿಕ್‌ಲ್ಯಾಂಡ್ ಅವರು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನವನ್ನು ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ಈಗ ಬಳಸಿಕೊಳ್ಳಲಾಗುತ್ತಿದೆ.

ಮೌರೌ ಅವರು ಎಕ್ಸ್‌ಟ್ರೀಮ್ ಲೈಟ್ ಇನ್‌ಫ್ರಾಸ್ಟ್ರಕ್ಚರ್ (ಇಎಲ್‌ಐ) ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಗತ್ತಿನ ಅತ್ಯಂತ ಶಕ್ತಿಶಾಲಿ ಲೇಸರ್ ‘ಅಪೋಲನ್’ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಇದು ಪರಮಾಣು ತ್ಯಾಜ್ಯ ನಿರ್ವಹಣೆ, ಗಡ್ಡೆ ಚಿಕಿತ್ಸೆ ಹಾಗೂ ಬಾಹ್ಯಾಕಾಶದ ತಾಜ್ಯ ಸ್ವಚ್ಛಗೊಳಿಸುವಲ್ಲಿ ನೆರವಾಗಲಿದೆ ಎನ್ನಲಾಗಿದೆ.

ಏನಿದು ಲೇಸರ್ ತಂತ್ರಜ್ಞಾನ?

ಲೇಸರ್ ಪದದ ವಿಸ್ತೃತ ರೂಪ ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮುಲೇಟೆಡ್ ಎಮಿಶನ್ ಆಫ್ ರೇಡಿಯೇಶನ್ (Light Amplification by Stimulated Emission of Radiation). 1960ರಲ್ಲಿ ಥಿಯೋಡೋರ್ ಮೈಮೆನ್ ಎಂಬ ವಿಜ್ಞಾನಿ ಮೊದಲ ಬಾರಿಗೆ ಲೇಸರ್‌ ಅನ್ನು ಆವಿಷ್ಕರಿಸಿದರು. ಈ ಲೇಸರ್ ತಂತ್ರಜ್ಞಾನವು ಚಾರ್ಲ್ಸ್ ಟೌನ್ಸ್ ಮತ್ತು ಲಿಯೋನಾರ್ಡ್ ಸ್ಕಾಲೋವ್ಸ್ ಎಂಬ ಭೌತ ವಿಜ್ಞಾನಿಗಳ ಸಿದ್ಧಾಂತವನ್ನು ಆಧರಿಸಿದೆ.

ಜಾಗತಿಕ ಮಟ್ಟದಲ್ಲಿ ಲೇಸರ್ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರ, ಕೈಗಾರಿಕೆ, ರಕ್ಷಣಾ ಕ್ಷೇತ್ರ, ಕಾನೂನು ಸುವ್ಯವಸ್ಥೆ, ಸಂಶೋಧನೆ, ವಸ್ತು ವಿನ್ಯಾಸ, ವಾಣಿಜ್ಯ ಮತ್ತು ಮನೋರಂಜನೆ ಕ್ಷೇತ್ರದಲ್ಲಿ ಲೇಸರ್ ತಂತ್ರಜ್ಞಾನ ಬಳಕೆಯಲ್ಲಿದೆ. ರಕ್ತ ರಹಿತ ಶಸ್ತ್ರ ಚಿಕಿತ್ಸೆಗೆ ಈ ತಂತ್ರಜ್ಞಾನವನ್ನು ಹೆಚ್ಚು ಬಳಕೆ ಮಾಡಲಾಗುತ್ತಿದೆ.

ಜಠರ ಮತ್ತು ಮೂತ್ರಪಿಂಡದಲ್ಲಿನ ಗಡ್ಡೆ, ಕಲ್ಲುಗಳನ್ನು ಕರಗಿಸಲು, ಕಣ್ಣಿನ ಪೊರೆ ಹಾಗೂ ಹಲ್ಲುಗಳ ಸ್ವಚ್ಛತೆಗೂ ಲೇಸರ್ ತಂತ್ರಜ್ಞಾನ ಬಳಕೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.