ಸಿಯೋಲ್: ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಜಂಟಿ ಸಮರಾಭ್ಯಾಸಕ್ಕೆ ಪ್ರತಿಯಾಗಿ ಉತ್ತರ ಕೊರಿಯಾವು ‘ದಕ್ಷಿಣ ಕೊರಿಯಾದ ಪ್ರದೇಶವನ್ನು ಆಕ್ರಮಿಸಿಕೊಳ್ಳುವ’ ಗುರಿಯೊಂದಿಗೆ ಮಿಲಿಟರಿ ಕಮಾಂಡ್ ತಾಲೀಮನ್ನು ನಡೆಸಿದೆ.
ಕೊರಿಯನ್ ಪೀಪಲ್ಸ್ ಆರ್ಮಿಯ (ಕೆಪಿಎ) ಜನರಲ್ ಸ್ಟಾಫ್ ಟ್ರೇನಿಂಗ್ ಕಮಾಂಡ್ ಪೋಸ್ಟ್‌ಗೆ ಭೇಟಿ ನೀಡಿದ್ದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಸ್ವತಃ ಸಮರಾಭ್ಯಾಸದ ಮೇಲ್ವಿಚಾರಣೆ ಮಾಡಿದರು ಎಂದು ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿಯನ್ನು (ಕೆಸಿಎನ್‌ಎ) ಉಲ್ಲೇಖಿಸಿ ಯೋನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಪ್ರಚೋದನಕಾರಿ ಹಾಗೂ ಅಪಾಯಕಾರಿ ಜಂಟಿ ಸಮರಾಭ್ಯಾಸಗಳಿಗೆ ಪ್ರತಿಕ್ರಿಯೆಯಾಗಿ ಇಡೀ ಸೈನ್ಯವನ್ನು ಒಳಗೊಂಡ ಮಿಲಿಟರಿ ಕಮಾಂಡ್ ಡ್ರಿಲ್ ಅನ್ನು ನಡೆಸಿರುವುದಾಗಿ ಉತ್ತರ ಕೊರಿಯಾ ಹೇಳಿದೆ.
ದಕ್ಷಿಣ ಕೊರಿಯಾ ಮತ್ತು ಅಮೆರಿಕ ಕೈಗೊಂಡಿರುವ ಸಮರಾಭ್ಯಾಸವು ಇಂದು ಅಂತ್ಯವಾಗುತ್ತದೆ. ಆಗಸ್ಟ್ 21ರಂದು ಈ ತಾಲೀಮು ಆರಂಭವಾಗಿತ್ತು. ಬುಧವಾರ, ಮಿತ್ರರಾಷ್ಟ್ರಗಳು ಜಂಟಿ ವಾಯು ಸಮರಾಭ್ಯಾಸ ನಡೆಸಿದ್ದವು.
‘ಶತ್ರುಗಳ ಹಠಾತ್ ಸಶಸ್ತ್ರ ಆಕ್ರಮಣವನ್ನು ಹಿಮ್ಮೆಟ್ಟಿಸುವ ಮೂಲಕ ಸಂಪೂರ್ಣ ಪ್ರತಿದಾಳಿಯನ್ನು ಸಂಘಟಿಸಿ ದಕ್ಷಿಣ ಕೊರಿಯಾ ಅರ್ಧದಷ್ಟು ಪ್ರದೇಶವನ್ನು ಆಕ್ರಮಿಸಿಕೊಳ್ಳುವ ಗುರಿಯನ್ನು ಈ ತಾಲೀಮು ಹೊಂದಿದೆ’ಎಂದು ಉತ್ತರ ಕೊರಿಯಾ ಹೇಳಿದೆ.
ಯುದ್ಧ ಎದುರಾದರೆ ಶತ್ರು ಪಡೆಯಿಂದ ಭಾರಿ ಪ್ರಮಾಣದ ಆಕ್ರಮಣ ಎದುರಾಗುವ ಸಾಧ್ಯತೆಯನ್ನು ಕಿಮ್ ಒತ್ತಿ ಹೇಳಿದ್ದಾರೆ.
ಉತ್ತರ ಕೊರಿಯಾದ ಪರಮಾಣು ಮತ್ತು ಕ್ಷಿಪಣಿ ಬೆದರಿಕೆಗಳನ್ನು ಎದುರಿಸಲು ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಜಪಾನ್ ತಮ್ಮ ಭದ್ರತಾ ಸಹಕಾರವನ್ನು ಹೆಚ್ಚಿಸಲು ಒಪ್ಪಂದಕ್ಕೆ ಬಂದಿರುವುದರಿಂದ ಉತ್ತರ ಕೊರಿಯಾ ತನ್ನ ನೌಕಾ ಪಡೆಗಳನ್ನು ಒಳಗೊಂಡಂತೆ ಮಿಲಿಟರಿ ಶಕ್ತಿಯನ್ನು ಬಲಪಡಿಸಲು ಕರೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.