ADVERTISEMENT

ಎರಡು ಹೊಸ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

ಪಿಟಿಐ
Published 1 ಜುಲೈ 2024, 2:46 IST
Last Updated 1 ಜುಲೈ 2024, 2:46 IST
   

ಸೋಲ್: ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಜಪಾನ್ ದೇಶಗಳ ಜಂಟಿ ಯುದ್ಧ ತಾಲೀಮಿಗೆ ಆಕ್ರಮಣಕಾರಿ ಮತ್ತು ಪ್ರಬಲ ಉತ್ತರ ನೀಡುವುದಾಗಿ ಘೋಷಿಸಿದ ಒಂದು ದಿನದ ಬಳಿಕ ಉತ್ತರ ಕೊರಿಯಾ ಎರಡು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಉತ್ತರ ಕೊರಿಯಾದ ಆಗ್ನೇಯದಲ್ಲಿರುವ ಜಂಗ್ಯೋನ್ ಪಟ್ಟಣದಿಂದ ಈಶಾನ್ಯಕ್ಕೆ 10 ನಿಮಿಷಗಳ ಕಾಲ ಕ್ಷಿಪಣಿ ಹಾರಿವೆ ಎಂದು ದಕ್ಷಿಣ ಕೊರಿಯಾ ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಮೊದಲ ಕ್ಷಿಪಣಿ 600 ಕಿ.ಮೀ(370 ಮೈಲಿ) ಕ್ರಮಿಸಿದ್ದು, ಎರಡನೇ ಕ್ಷಿಪಣಿಯು 120 ಕಿ.ಮೀ(75 ಮೈಲಿ) ಕ್ರಮಿಸಿದೆ ಎಂದು ಹೇಳಲಾಗಿದೆ. ಆದರೆ, ಅವುಗಳು ಎಲ್ಲಿ ಲ್ಯಾಂಡ್ ಆಗಿವೆ ಎಂಬ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ.

ADVERTISEMENT

ಉತ್ತರ ಕೊರಿಯಾವು ಸಾಮಾನ್ಯವಾಗಿ ಸಮುದ್ರದ ಮೇಲೆ ಈಶಾನ್ಯ ದಿಕ್ಕಿಗೆ ಕ್ಷಿಪಣಿಗಳನ್ನು ಹಾರಿಸುತ್ತೆ. ಆದರೆ, 2ನೇ ಕ್ಷಿಪಣಿಯು ನೀರಿಗೆ ತಲುಪಲು ಸಾಧ್ಯವಾಗಿರುವುದಿಲ್ಲ. ಏಕೆಂದರೆ, ಅದು ಕ್ರಮಿಸಿದ ದೂರ ಅತ್ಯಂತ ಕಡಿಮೆಯಾಗಿತ್ತು. ಹೀಗಾಗಿ, ಆ ಕ್ಷಿಪಣಿ ಉತ್ತರ ಕೊರಿಯಾ ಪ್ರದೇಶದಲ್ಲೇ ಪತನವಾಗಿರುವ ಸಾಧ್ಯತೆ ಇದ್ದು, ಅಪಾರ ಹಾನಿ ಸಂಭವಿಸಿರಬಹುದು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ಕೊರಿಯಾ ಸೇನಾ ಮುಖ್ಯಸ್ಥ, ಉತ್ತರ ಕೊರಿಯಾದ ಯಾವುದೇ ಪ್ರಚೋದನೆಗೆ ಪ್ರತಿಕ್ರಿಯಿಸಲು ಅಮೆರಿಕದ ಜೊತೆ ಸನ್ನದ್ಧವಾಗಿದ್ದೇವೆ ಎಂದಿದ್ದಾರೆ.

ಇತ್ತೀಚೆಗೆ, ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್ ನಡೆಸಿದ ಹಲವು ಆಯಾಮಗಳ ಯುದ್ಧ ತಾಲೀಮು ಅಂತ್ಯಗೊಂಡ ಎರಡು ದಿನಗಳ ಬಳಿಕ ಉತ್ತರ ಕೊರಿಯಾದಿಂದ ಈ ಪ್ರತಿಕ್ರಿಯೆ ಬಂದಿದೆ.

ಉತ್ತರ ಕೊರಿಯಾದಿಂದ ಅಣ್ವಸ್ತ್ರದ ಆತಂಕ ಮತ್ತು ಅದಕ್ಕೆ ಬೆಂಬಲವಾಗಿ ಚೀನಾ ನಿಂತಿರುವ ಹಿನ್ನೆಲೆಯಲ್ಲಿ ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳು ತಮ್ಮ ತ್ರಿಪಕ್ಷೀಯ ರಕ್ಷಣಾ ಒಡಂಬಡಿಕೆಯನ್ನು ವಿಸ್ತರಿಸುತ್ತಿವೆ.

‘ಫ್ರೀಡಂ ಎಡ್ಜ್’ ಹೆಸರಿನಲ್ಲಿ ಖಂಡಾಂತರ ಕ್ಷಿಪಣಿಗಳಿಂದ ರಕ್ಷಣೆ, ಜಲಾಂತರ್ಗಾಮಿ ವಿರೋಧಿ ಯುದ್ಧ, ಕಣ್ಗಾವಲು ಮತ್ತು ಇತರ ಕೌಶಲ್ಯಗಳು ಹಾಗೂ ಸಾಮರ್ಥ್ಯಗಳನ್ನು ಸುಧಾರಿಸಲು ಸಜ್ಜಾದ ಏಕಕಾಲಿಕ ವಾಯು ಮತ್ತು ನೌಕಾ ತಾಲೀಮನ್ನು ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಾ ನಡೆಸಿದ್ದವು.

ಹಳೆಯ ಸಮರಾಭ್ಯಾಸಕ್ಕೆ ಬದಲಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸಮರಾಭ್ಯಾಸ ಇದಾಗಿತ್ತು. ಮೂರು ದಿನಗಳ ಸಮರಾಭ್ಯಾಸದಲ್ಲಿ ಅಮೆರಿಕದ ವಿಮಾನವಾಹಕ ನೌಕೆ ಹಾಗೂ ಮೂರು ದೇಶಗಳ ವಿಧ್ವಂಸಕ, ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ಭಾಗವಹಿಸಿದ್ದವು.

ಈ ಸಮರಾಭ್ಯಾಸವನ್ನು ಏಷ್ಯಾದ ‘ನ್ಯಾಟೊ’ ಅವತರಣಿಕೆ ಎಂದು ಹೇಳಿದ್ದ ಉತ್ತರ ಕೊರಿಯಾ, ಪ್ರಬಲ ಪ್ರತಿಕ್ರಿಯೆಯ ಪ್ರಮಾಣ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.