ಪೊಂಗ್ಯಾಂಗ್: ಉತ್ತರ ಕೊರಿಯಾ ಸೇನೆಯ ‘ಒಂಭತ್ತನೇ ದಳ‘ವು ತನ್ನ ಸೈನಿಕರನ್ನು ‘ಗ್ರೈನ್ ಲೀವ್– ಧಾನ್ಯ ಸಂಗ್ರಹ ರಜೆ‘ ಮೇರೆಗೆ ಮನೆಗಳಿಗೆ ಕಳುಹಿಸುತ್ತಿದೆ.
ಈ ಕುರಿತು ಮಾಧ್ಯಮ ಸಂಸ್ಥೆ ‘ಡೈಲಿ ಎನ್‌ಕೆ‘ ವರದಿ ಮಾಡಿದೆ. ಉತ್ತರ ಕೊರಿಯಾದ ಆಂತರಿಕ ಬೆಳವಣಿಗೆಗಳ ಮೇಲೆ ನಿಗಾ ವಹಿಸಿರುವ ‘ಡೈಲಿ ಎನ್‌ಕೆ‘ ಬಾಹ್ಯ ಮೂಲದಿಂದ ವರದಿಗಳನ್ನು ಪ್ರಕಟಿಸುತ್ತದೆ.
‘ ಸೈನಿಕರನ್ನು ರಜೆ ಮೇಲೆ ಕಳುಹಿಸಲಾಗುತ್ತಿದೆ. ಮರಳಿ ಬರುವಾಗ ಅವರು ತಮ್ಮ ದಳಕ್ಕೆ ಸಾಕಾಗುವಷ್ಟು ಆಹಾರ ಧಾನ್ಯ ತರಬೇಕು ಎಂದು ಆ ಸೈನಿಕರಿಗೆ ಷರತ್ತು ವಿಧಿಸಲಾಗುತ್ತಿದೆ,‘ ಎಂದುಉತ್ತರ ಹ್ಯಾಮ್‌ಗ್ಯಾಂಗ್ ಪ್ರಾಂತ್ಯದಮೂಲಗಳು ಮಾಹಿತಿ ನೀಡಿವೆ.
ಸೇನೆಯಲ್ಲಿ ತಾವಿರುವ ವಿಭಾಗಕ್ಕೆ ಅಗತ್ಯವಿರುವ ಪದಾರ್ಥಗಳನ್ನು ಹೊಂದಿಸಿ ತರಲು ಅಧಿಕಾರಿಗಳು ಮತ್ತು ಸೇನೆಗೆ ಸಂಬಂಧಿಸಿದ ಸಿಬ್ಬಂದಿಗಳಿಗೆ ರಜೆ ನೀಡಿ ಕಳುಹಿಸುವ ಪರಿಪಾಠ ಉತ್ತರ ಕೊರಿಯಾದಲ್ಲಿದೆ. ಸದ್ಯ9ನೇ ದಳವನ್ನು ಆಹಾರ ಧಾನ್ಯ ಹೊಂದಿಸಿ ತರಲು ಕಳುಹಿಸಲಾಗಿದೆ. 10–20 ದಿನಗಳಲ್ಲಿ ಅವರು ಮರಳಬೇಕು.
ಮೇ ಆರಂಭದಲ್ಲಿ ಆದೇಶವೊಂದನ್ನು ಹೊರಡಿಸಿದ್ದ ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ‘ಸೈನಿಕರು ಅಪೌಷ್ಠಿಕತೆಯ ಅಪಾಯಕಾರಿ ಸ್ಥಿತಿಯಲ್ಲಿದ್ದಾರೆ. ಅವರಿಗೆ ದಿನಕ್ಕೆ ಕನಿಷ್ಠ ಒಂದು ಹುರುಳಿ ಆಧಾರಿತ ಭೋಜನ ನೀಡುವುದನ್ನಾದರೂ ಖಚಿತಪಡಿಸಬೇಕು,‘ ಎಂದು ಮಿಲಿಟರಿ ಘಟಕಗಳಿಗೆ ನಿರ್ದೇಶನ ನೀಡಿದ್ದರು.
ಸೈನಿಕರಿಗೆ ಭೋಜನ ನೀಡದ ಕಮಾಂಡರ್‌ಗಳನ್ನು ಕರುಣೆ ಇಲ್ಲದೇ ಶಿಕ್ಷಿಸಲಾಗುತ್ತದೆ ಎಂದೂ ಕಿಮ್ ಎಚ್ಚರಿಕೆ ನೀಡಿದ್ದರು. ಆದರೆ, ಆಹಾರ ಧಾನ್ಯದ ಕೊರತೆ ಎದುರಿಸುತ್ತಿದ್ದ ಕಮಾಂಡರ್‌ಗಳಿಗೆ ಕಿಮ್ ಆದೇಶವು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
ಕಿಮ್ ಆದೇಶದ ಹಿನ್ನೆಲೆಯಲ್ಲಿ, ಕಮಾಂಡರ್‌ಗಳು ತಮ್ಮ ವಿಭಾಗದಲ್ಲಿನ ಸ್ಥಿತಿವಂತ ಸೈನಿಕರನ್ನು ಗುರುತಿಸಿ ಅವರಿಗೆ ಪ್ರಯಾಣ ಆದೇಶ ನೀಡಿದ್ದಾರೆ.ಪ್ರಯಾಣ ಆದೇಶ ಪಡೆದ ಸೈನಿಕರಿಗೆ ಆಹಾರ ಧಾನ್ಯಹೊಂದಿಸುವ ಹೊಣೆಗಾರಿಕೆ ನೀಡಲಾಗಿದೆ.
‘ಮೊದಲು, ಇದನ್ನು ‘ ಹುರುಳಿ ರಜೆ ’ಎಂದು ಕರೆಯಲಾಗುತ್ತಿತ್ತು. ಆದರೆ ಈಗ ‘ಧಾನ್ಯ ರಜೆ ’ಎಂದು ಕರೆಯಲಾಗುತ್ತಿದೆ. ಸೈನಿಕರು ತಮಗೆ ಸಾಧ್ಯವಾದರೆ ಹುರುಳಿಯನ್ನು ತರಬೇಕು. ಇಲ್ಲವಾದರೆ ಅಕ್ಕಿ ಅಥವಾ ಜೋಳವನ್ನು ತರಬೇಕು ಎಂದು ಮೂಲಗಳು ತಿಳಿಸಿವೆ.
ಪ್ರತಿ ಸೈನಿಕ 300 ಕೆ.ಜಿ ಹುರುಳಿ ತರಬೇಕು. ಜುಲೈ 1ರಂದು ಆರಂಭವಾಗುವ ಬೇಸಿಗೆ ಮಿಲಿಟರಿ ಡ್ರಿಲ್‌ಗೂ 10 ರಿಂದ 14 ದಿನಗಳ ಮೊದಲು ಸೈನಿಕರು ಆಹಾರ ಧಾನ್ಯದೊಂದಿಗೆ ತಮ್ಮ ಘಟಕಗಳಿಗೆ ಮರಳಬೇಕು ಎಂದು ಮಿಲಿಟರಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಷ್ಟೇನೂ ಶಕ್ತವಲ್ಲದ ಕುಟುಂಬಗಳ ಮೇಲೂ ಆಹಾರ ಧಾನ್ಯಕ್ಕಾಗಿ ಒತ್ತಡ ಹೇರಲಾಗುತ್ತಿದೆ. ಅಧಿಕಾರಿಗಳ ಈ ಆದೇಶ ಸೈನಿಕರ ಕುಟುಂಬಗಳ ಮೇಲೆ ಹೊರೆ ಸೃಷ್ಟಿ ಮಾಡಿದೆ. ಒಂದು ವೇಳೆ ಅಧಿಕಾರಿಗಳ ಸೂಚನೆಯಂತೆ ಆಹಾರ ಧಾನ್ಯ ಹೊಂದಿಸಲಾಗದ ಸೈನಿಕರುಕಳ್ಳತನಕ್ಕೆ ಇಳಿಯುವ ಸಾಧ್ಯತೆಗಳಿವೆ ಎಂದು ಡೈಲಿ ಎನ್‌ಕೆ ವರದಿ ಮಾಡಿದೆ.
ಕೋವಿಡ್ 19 ಕಾರಣದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದ್ದು, ಅದು ನೇರವಾಗಿ ಮಿಲಿಟರಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಉತ್ತರ ಕೊರಿಯಾದಲ್ಲಿ ಮಿಲಿಟರಿಯು ಆಡಳಿತದ ಬೆನ್ನೆಲುಬು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.