ADVERTISEMENT

ಕೆಣಕಿದರೆ ಅಣ್ವಸ್ತ್ರ ಪ್ರಯೋಗ: ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್‌ ಉನ್‌

ಎಪಿ
Published 21 ಡಿಸೆಂಬರ್ 2023, 14:18 IST
Last Updated 21 ಡಿಸೆಂಬರ್ 2023, 14:18 IST
ಹಾಸ್ವಾಂಗ್‌–18 ಕ್ಷಿಪಣಿ ಉಡಾವಣೆ ಕಾರ್ಯಾಚರಣೆ ಪರಿಶೀಲಿಸುತ್ತಿರುವ ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್‌ ಉನ್‌ – ಎಎಫ್‌ಪಿ ಚಿತ್ರ 
ಹಾಸ್ವಾಂಗ್‌–18 ಕ್ಷಿಪಣಿ ಉಡಾವಣೆ ಕಾರ್ಯಾಚರಣೆ ಪರಿಶೀಲಿಸುತ್ತಿರುವ ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್‌ ಉನ್‌ – ಎಎಫ್‌ಪಿ ಚಿತ್ರ    

ಸೋಲ್‌: ’ಶತ್ರು ರಾಷ್ಟ್ರಗಳೇನಾದರೂ ಕೆಣಕಿದರೆ ಅವರ ವಿರುದ್ಧ ಅಣ್ವಸ್ತ್ರ ಪ್ರಯೋಗಿಸುವ ನೀತಿಯನ್ನು ನಾವು ಅಳವಡಿಸಿಕೊಂಡಿದ್ದೇವೆ‘ ಎಂದು ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್‌ ಉನ್‌ ಎಚ್ಚರಿಕೆ ನೀಡಿದ್ದಾರೆ. 

ಕಳೆದ ಸೋಮವಾರ ಉತ್ತರ ಕೊರಿಯಾವು ‘ಹ್ವಸಾಂಗ್‌–18’ ಎಂಬ ಕ್ಷಿಪಣಿ ಪರೀಕ್ಷೆ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸೇನೆಯನ್ನು ಪ್ರಶಂಸಿಸುವ ವೇಳೆ ಕಿಮ್‌ ಹೀಗೆ ಹೇಳಿದ್ದಾರೆ.

‘ಶತ್ರುಗಳ ಮೇಲೆ ಮೊದಲೇ ಅಣ್ವಸ್ತ್ರ ಪ್ರಯೋಗಿಸಿ, ಭಯ ಸೃಷ್ಟಿ ಮಾಡುವ ಯುದ್ಧ ಸನ್ನದ್ಧತೆಯಿಂದ ಮಾತ್ರ ಶಾಂತಿಯನ್ನು ಖಾತರಿಪಡಿಸಲು ಸಾಧ್ಯ’ ಎಂದು ಕಿಮ್‌ ಜಾಂಗ್‌ ಉನ್‌ ಹೇಳಿದ್ದಾರೆ ಎಂದು ಸ್ಥಳೀಯ ಸುದ್ದಿ ಮಾಧ್ಯಮ ಕೆಸಿಎನ್‌ಎ ವರದಿ ಮಾಡಿದೆ. 

ADVERTISEMENT

’ದೀರ್ಘಶ್ರೇಣಿಯ ಖಂಡಾಂತರ ಕ್ಷಿಪಣಿಗಳನ್ನು ಪ್ರಯೋಗಿಸಲು ಅವಕಾಶ ಕಲ್ಪಿಸುವ ಕಾನೂನನ್ನು ಉತ್ತರ ಕೊರಿಯ ಕಳೆದ ವರ್ಷ ಅಳವಡಿಸಿಕೊಂಡಿತು. ಶತ್ರುಗಳ ಮೇಲೆ ಅಣ್ವಸ್ತ್ರ ಪ್ರಯೋಗ ಮಾಡುವ ಬಗ್ಗೆ ಕಿಮ್‌ ಈಗಾಗಲೇ ಹಲವು ಬಾರಿ ಹೇಳಿದ್ದಾರೆ. ಆದರೆ, ಕ್ರಿಯಾತ್ಮಕ ಅಣ್ವಸ್ತ್ರ ಕ್ಷಿಪಣಿಗಳು ಉತ್ತರ ಕೊರಿಯಾದ ಬಳಿ ಇಲ್ಲ. ಜತೆಗೆ, ಅಣ್ವಸ್ತ್ರದ ವಿಷಯದಲ್ಲಿ ಉತ್ತರ ಕೊರಿಯಾವು ಅಮೆರಿಕ ಹಾಗೂ ಮಿತ್ರಪಡೆಗಳಿಗಿಂತಲೂ ಹಿಂದುಳಿದೆ. ಹೀಗಾಗಿ ಅದು ಅಣ್ವಸ್ತ್ರ ಪ್ರಯೋಗಿಸುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.     

2022ರಿಂದ ಈಚೆಗೆ ಉತ್ತರ ಕೊರಿಯಾ 100ಕ್ಕೂ ಹೆಚ್ಚು ಖಂಡಾಂತರ ಕ್ಷಿಪಣಿಗಳ ಪರೀಕ್ಷೆಗಳನ್ನು ನಡೆಸಿದ್ದು, ಅವುಗಳಲ್ಲಿ ಬಹುಪಾಲು ಅಮೆರಿಕ ಮತ್ತು ದಕ್ಷಿಣ ಕೊರಿಯಾವನ್ನು ಗುರಿಯಾಗಿಸಿ ದಾಳಿ ನಡೆಸುವ ಸಾಮರ್ಥ್ಯವುಳ್ಳವಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.