ಸಿಯೊಲ್: ಯುಎಸ್‌ನ ಪರಮಾಣು ಸಾಮರ್ಥ್ಯವು ಬೆದರಿಕೆಯಾಗಿ ಪರಣಮಿಸಿದೆ ಎಂದಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು, ದೇಶದ ಕ್ಷಿಪಣಿ ನೆಲೆಗಳಿಗೆ ಭೇಟಿ ನೀಡಿ ಸಿದ್ಧತೆಯ ಪರಿಶೀಲನೆ ನಡೆಸಿದ್ದಾರೆ. ಉತ್ತರ ಕೊರಿಯಾದ ಅಧಿಕೃತ ಸುದ್ದಿ ಸಂಸ್ಥೆ 'ಕೆಸಿಎನ್‌ಎ' ಬುಧವಾರ ಈ ಬಗ್ಗೆ ವರದಿ ಮಾಡಿದೆ.
'ಯುಎಸ್‌ನ ಪರಮಾಣು ಕಾರ್ಯತಂತ್ರಗಳಿಂದಾಗಿ ಉತ್ತರ ಕೊರಿಯಾದ ಭದ್ರತಾ ವ್ಯವಸ್ಥೆಗೆ ಬೆದರಿಕೆ ಹೆಚ್ಚುತ್ತಿದೆ. ದೀರ್ಘಾವಧಿಯ ಇಂತಹ ಆತಂಕವು ದೇಶದ ಸಮಗ್ರ ಮತ್ತು ನಿಖರವಾದ ಪ್ರತಿಕಾರ್ಯಾಚರಣೆಗೆ ಮಹತ್ವ ನೀಡಿದೆ' ಎಂದು ಕಿಮ್ ಹೇಳಿರುವುದಾಗಿ ಅಲ್ಲಿನ ಸುದ್ದಿ ಸಂಸ್ಥೆ 'ಕೆಸಿಎನ್‌ಎ' ಉಲ್ಲೇಖಿಸಿದೆ.
ಕ್ಷಿಪಣಿ ಸಾಮರ್ಥ್ಯ ವೃದ್ಧಿಗೆ ಆದ್ಯತೆ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಸಶಸ್ತ್ರ ಪಡೆಗಳ ಆಧುನೀಕರಣ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವ ಅವರು, ಇದು 'ರಾಷ್ಟ್ರೀಯ ಭದ್ರತೆಯನ್ನು ಬಲಗೊಳಿಸುವ ಪ್ರಮುಖ ನೀತಿ' ಎಂದು ಪರಿಗಣಿಸಬೇಕೆಂದು ಸೂಚಿಸಿದ್ದಾರೆ.
ಈ ಭೇಟಿ ವೇಳೆ ಕಿಮ್ ಅವರೊಂದಿಗೆ ಅವರ ಸಹೋದರಿ ಕಿಮ್ ಯೊ ಜಾಂಗ್, ಆಡಳಿತಾರೂಢ 'ಕೊರಿಯಾ ವರ್ಕರ್ಸ್ ಪಕ್ಷದ' ಕೇಂದ್ರ ಸಮಿತಿಯ ಮೊದಲ ಉಪ ವಿಭಾಗದ ನಿರ್ದೇಶಕ ಕಿಮ್ ಜಾಂಗ್ ಸಿಕ್ ಅವರೂ ಇದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಭೇಟಿ ನೀಡಿದ್ದು ಯಾವಾಗ ಎಂಬುದು ಉಲ್ಲೇಖವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.