ADVERTISEMENT

ಕೆನಡಾ ಸಡಿಲ ನಿಯಮ ಹೊಂದಿಲ್ಲ: ಮಾರ್ಕ್‌ ಮಿಲ್ಲರ್‌

ಪಿಟಿಐ
Published 7 ಮೇ 2024, 16:07 IST
Last Updated 7 ಮೇ 2024, 16:07 IST
ಕೆನಡಾ ಧ್ವಜ
ಕೆನಡಾ ಧ್ವಜ   

ಒಟ್ಟಾವ (ಪಿಟಿಐ): ‘ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ಬರುವವರ ಕುರಿತ ಸಂಪೂರ್ಣ ದಾಖಲೆಗಳನ್ನು ನಮ್ಮ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ’ ಎಂದು ಕೆನಡಾದ ವಲಸೆ, ನಿರಾಶ್ರಿತರು ಹಾಗೂ ಪೌರತ್ವ ಸಚಿವ ಮಾರ್ಕ್ ಮಿಲ್ಲರ್ ತಿಳಿಸಿದರು.

ಅಪರಾಧಿಗಳು ದೇಶ ಪ್ರವೇಶಿಸುವುದನ್ನು ತಡೆಯಲು ಕೆನಡಾ ಬಿಗಿ ನಿಯಮ ಅನುಸರಿಸುತ್ತಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಜೈಶಂಕರ್‌ ಹೇಳಿಕೆಯನ್ನು ತಿರಸ್ಕರಿಸಿರುವ ಕೆನಡಾ ಸಚಿವರು, ‘ನಮ್ಮ ನಿಯಮಗಳು ಸಡಿಲವಾಗಿಲ್ಲ. ನಮ್ಮ ಅಧಿಕಾರಿಗಳು, ಕೆನಡಾಕ್ಕೆ ಪ್ರವೇಶಿಸುವವರ ಪೂರ್ಣ ದಾಖಲೆಗಳನ್ನು ಪರಿಶೀಲಿಸುತ್ತಾರೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಕೆನಡಾ, ಭಾರತ ಮತ್ತು ಉಭಯ ದೇಶಗಳ ಸಂಬಂಧಕ್ಕೆ ಸಮಸ್ಯೆಗಳನ್ನು ತಂದೊಡ್ಡುವಂತಹ ಜನರಿಗೆ ವೀಸಾ ನೀಡದಂತೆ ಅಥವಾ ರಾಜಕೀಯ ಆಶ್ರಯ ಒದಗಿಸದಂತೆ ಭಾರತವು ಕೆನಡಾದ ಅಧಿಕಾರಿಗಳಿಗೆ ಹಲವು ಬಾರಿ ಮನವರಿಕೆ ಮಾಡಿದೆ’ ಎಂದು ಜೈಶಂಕರ್‌ ಶನಿವಾರ ಹೇಳಿದ್ದರು.

ಖಾಲಿಸ್ತಾನ ಪ್ರತ್ಯೇಕತಾವಾದಿ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆಗೆ ಸಂಬಂಧಿಸಿದಂತೆ ಕೆನಡಾದ ಅಧಿಕಾರಿಗಳು ಮೂವರು ಭಾರತೀಯ ಪ್ರಜೆಗಳ ಮೇಲೆ ಆರೋಪ ಹೊರಿಸಿದ್ದಾರೆ. ಅವರು ವಿದ್ಯಾರ್ಥಿ ವೀಸಾದಲ್ಲಿ ಕೆನಡಾ ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಜೈಶಂಕರ್‌ ಅವರಿಂದ ಪ್ರತಿಕ್ರಿಯೆ ಬಂದಿತ್ತು.

ಎಡ್ಮಂಟನ್‌ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳಾದ ಕರಣ್‌ ಬ್ರಾರ್‌ (22), ಕಮಲ್‌ಪ್ರೀತ್‌ ಸಿಂಗ್‌ (22), ಕರಣ್‌ಪ್ರೀತ್‌ ಸಿಂಗ್‌ (28) ಅವರ ವಿರುದ್ಧ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ. 

ನಿಜ್ಜಾರ್‌ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಭಾರತೀಯರು, ವಿದ್ಯಾರ್ಥಿ ವೀಸಾದಲ್ಲಿ ಕೆನಡಾದಲ್ಲಿದ್ದರೆ ಎಂಬುದನ್ನು ಖಚಿತಪಡಿಸಲು ಮಿಲ್ಲರ್‌ ನಿರಾಕರಿಸಿದರು. ತನಿಖೆ ನಡೆಯುತ್ತಿರುವ ಕಾರಣ ಈ ಸಮಯದಲ್ಲಿ ಮಾಹಿತಿ ಹಂಚಿಕೊಳ್ಳಲಾಗದು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.