ನ್ಯೂಯಾರ್ಕ್: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಾಡಿರುವ ಸಾಧನೆಯನ್ನು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಹೊಗಳಿದೆ.
‘ಬಾಹ್ಯಾಕಾಶ ತಂತ್ರಜ್ಞಾನ, ನವೋದ್ಯಮಗಳ ಕ್ಷೇತ್ರದಲ್ಲಿ ಭಾರತ ಭಾರಿ ಪ್ರಗತಿ ದಾಖಲಿಸಿದೆ. ಬಾಹ್ಯಾಕಾಶದೊಂದಿಗೆ ಪೃಥ್ವಿ ಸಾಧಿಸಲಿರುವ ಸಂಪರ್ಕ ವಿಷಯದಲ್ಲಿ ಅಗಾಧ ಪರಿವರ್ತನೆ ತರಲಿರುವ ಭಾರತ, ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಲಿದೆ’ ಎಂದು ಪತ್ರಿಕೆ ಬಣ್ಣಿಸಿದೆ.
‘ದಿ ಸರ್ಪ್ರೈಸಿಂಗ್ ಸ್ಟ್ರೈವರ್ ಇನ್ ದಿನ ವರ್ಲ್ಡ್ಸ್ ಸ್ಪೇಸ್ ಬ್ಯುಸಿನೆಸ್’ ಎಂಬ ಲೇಖನದಲ್ಲಿ, ಭಾರತದ ಸಾಧನೆಗಳನ್ನು ವಿವರಿಸಲಾಗಿದೆ.
‘1963ರಲ್ಲಿ ಮೊದಲ ರಾಕೆಟ್ ಉಡ್ಡಯನ ಮಾಡಿದಾಗ ಭಾರತ ಬಡರಾಷ್ಟ್ರವಾಗಿತ್ತು. ಚಿಕ್ಕದಾದ ಗಗನನೌಕೆಯನ್ನು ಸೈಕಲ್ ಮೇಲೆಯೇ ಉಡಾವಣೆ ಕೇಂದ್ರಕ್ಕೆ ಒಯ್ದು, ಭೂಮಿಯಿಂದ 124 ಮೈಲುಗಳಷ್ಟು ದೂರದ ಕಕ್ಷೆಯಲ್ಲಿ ಅದನ್ನು ಸೇರಿಸಲಾಗಿತ್ತು’.
‘ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕ ಹಾಗೂ ರಷ್ಯಾಕ್ಕೆ ಸರಿಸಮನಾಗಿ ಹೆಜ್ಜೆ ಹಾಕಲು ಆಗ ಹೆಣಗಾಡುತ್ತಿದ್ದ ಭಾರತ, ಈ ವಿಚಾರದಲ್ಲಿ ಈಗ ತನ್ನ ಛಾಪು ಮೂಡಿಸಿದೆ’ ಎಂದು ಲೇಖನ ಹೊಗಳಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದನ್ನು ಪ್ರಸ್ತಾಪಿಸಿರುವ ಪತ್ರಿಕೆ, ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಹಕಾರವನ್ನು ಹೊಸ ಎತ್ತರಕ್ಕೆ ಒಯ್ಯುವ ಕುರಿತು ಮೋದಿ ಹಾಗೂ ಅಧ್ಯಕ್ಷ ಜೋ ಬೈಡನ್ ನೀಡಿದ್ದ ಜಂಟಿ ಹೇಳಿಕೆಯನ್ನು ಉಲ್ಲೇಖಿಸಿದೆ.
ಇಸ್ರೊ ಅಲ್ಲದೇ, ನವೋದ್ಯಮಗಳಾದ ಹೈದರಾಬಾದ್ ಮೂಲದ ‘ಸ್ಕೈರೂಟ್ ಏರೋಸ್ಪೇಸ್’, ‘ಧ್ರುವ ಸ್ಪೇಸ್’, ಬೆಂಗಳೂರು ಮೂಲದ ‘ಪಿಕ್ಸೆಲ್’ನ ಸಾಧನೆಯನ್ನು ‘ನ್ಯೂಯಾರ್ಕ್ ಟೈಮ್ಸ್’ ಶ್ಲಾಘಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.