ಜೆರುಸಲೇಂ: ಹಮಾಸ್ ಬಂಡುಕೋರ ಸಂಘಟನೆಯ ಮುಖ್ಯಸ್ಥ ಯಹ್ಯಾ ಸಿನ್ವರ್ (61) ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಗುರುವಾರ ಹೇಳಿದೆ.
ಅ. 7, 2023ರಂದು ಇಸ್ರೇಲ್ ಮೇಲೆ ನಡೆಸಲಾಗಿದ್ದ ದಾಳಿಯ ಪ್ರಮುಖ ಸಂಚುಕೋರ ಈತನಾಗಿದ್ದ. ಈ ಹತ್ಯೆಯಿಂದ ಹಮಾಸ್‌ಗೆ ಭಾರಿ ಪೆಟ್ಟು ಬಿದ್ದಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
‘ಆದರೆ, ಇದರಿಂದ ಯುದ್ಧ ಅಂತ್ಯಗೊಂಡಿಲ್ಲ. ಸಿನ್ವನ್ ಹತ್ಯೆಯೂ ಹಮಾಸ್ ಪಿಡುಗು ನಿರ್ಮೂಲನೆಗೊಳಿಸುವ ಯತ್ನದಲ್ಲಿ ದೊಡ್ಡ ಮೈಲುಗಲ್ಲು ಇದಾಗಿದೆ’ ಎಂದು ಹೇಳಿದ್ದಾರೆ.
‘ಗಾಜಾದಲ್ಲಿ ಗುರುವಾರ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು ಮೂವರು ಬಂಡುಕೋರರು ಮೃತಪಟ್ಟಿದ್ದು, ಇವರಲ್ಲಿ ಸಿನ್ವರ್ ಕೂಡ ಒಬ್ಬರು’ ಎಂದಿದೆ.
ಇದಕ್ಕೂ ಮುನ್ನ ‘ಮೃತರಲ್ಲಿ ಸಿನ್ವರ್ ಇರಬಹುದೇ ಎಂದು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆ ನಡೆ ಸಲಾಗುತ್ತಿದೆ’ ಎಂದು ಇಸ್ರೇಲ್ ಸೇನೆ ತಿಳಿಸಿತ್ತು. ಆದರೆ ಯಾವಾಗ, ಎಲ್ಲಿ ದಾಳಿ ಮಾಡಲಾಗಿದೆ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
‘ಸಿನ್ವರ್ ಮೃತಪಟ್ಟಿದ್ದಾರೆ’ ಎಂಬುದನ್ನು ಹಮಾಸ್ ಸಂಘಟನೆ ದೃಢಪಡಿಸಿಲ್ಲ.
‘ಸಿನ್ವರ್ ಕುರಿತು ಹಮಾಸ್ ನೀಡುವ ಮಾಹಿತಿಯನ್ನು ಮಾತ್ರವೇ ನಂಬಿ. ಇಸ್ರೇಲ್‌ನ ಮಾಧ್ಯಮಗಳು ನೀಡುವ ಮಾಹಿತಿಗಳನ್ನು ನಂಬಬೇಡಿ. ಅವುಗಳು ನಮ್ಮ ಮನೋಬಲ ಕುಗ್ಗಿಸುವುದಕ್ಕೆ ಸುದ್ದಿ ಬಿತ್ತರಿಸುತ್ತವೆ’ ಎಂದು ಹಮಾಸ್ ಬೆಂಬಲಿತ ‘ಅಲ್–ಮಜ್ದ್’ ವೆಬ್‌ಸೈಟ್‌ನಲ್ಲಿ ಪೋಸ್ಟ್‌ವೊಂದು ಹಂಚಿಕೆಯಾಗಿದೆ.
‘ದಕ್ಷಿಣ ಗಾಜಾದ ರಫಾ ನಗರದಲ್ಲಿ ನೆಲ ಮಾರ್ಗದಲ್ಲಿ ನಡೆಸಿದ ದಾಳಿಯ ವೇಳೆ ಸಿನ್ವರ್ ಅವರನ್ನು ಸೇನೆ ಹತ್ಯೆ ಮಾಡಿದೆ’ ಎಂದು ಇಸ್ರೇಲ್ ಸೇನೆಯ ರೇಡಿಯೊ ವಾಹಿನಿ ಸುದ್ದಿ ಬಿತ್ತರಿಸಿದೆ. ‘ಮೂವರು ಬಂಡುಕೋರರಲ್ಲಿ ಸಿನ್ವರ್ ಅವರ ಶವವಿರುವ ದೃಶ್ಯಗಳ ವಿಡಿಯೊ, ಸೇನೆಯ ಬಳಿ ಇದೆ’ ಎಂದೂ ಅದು ಹೇಳಿದೆ. ಸಿನ್ವರ್ ಅವರ ಇಸ್ರೇಲ್‌ನ ಜೈಲಿನಲ್ಲಿದ್ದ ಸಮಯದಲ್ಲಿ, ಅವರ ಡಿಎನ್‌ಎ ಮಾದರಿಗಳನ್ನು ಇಸ್ರೇಲ್ ಸಂಗ್ರಹಿಸಿ ಇಟ್ಟುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.