ADVERTISEMENT

ಮೌಂಟ್‌ ಎವರೆಸ್ಟ್‌: ಅಮೆರಿಕ, ಹಾಂಗ್‌ಕಾಂಗ್‌ ಪರ್ವತಾರೋಹಿಗಳಿಂದ ಹೊಸ ದಾಖಲೆ

ಏಜೆನ್ಸೀಸ್
Published 30 ಮೇ 2021, 7:32 IST
Last Updated 30 ಮೇ 2021, 7:32 IST
ತ್ಸಾಂಗ್ ಯಿನ್-ಹ್ಯಾಂಗ್
ತ್ಸಾಂಗ್ ಯಿನ್-ಹ್ಯಾಂಗ್   

ಕಠ್ಮಂಡು: ಕೆಟ್ಟ ಹವಾಮಾನದಿಂದಾಗಿ ಅದೆಷ್ಟೋ ತಂಡಗಳು ವಿಶ್ವದ ಅತಿ ಎತ್ತರದ ಶಿಖರ ಮೌಂಟ್‌ ಎವರೆಸ್ಟ್‌ ಅನ್ನು ಏರಲು ಪರದಾಡುತ್ತಿವೆ. ಈ ನಡುವೆ ಷಿಕಾಗೊದ ನಿವೃತ್ತ ವಕೀಲರೊಬ್ಬರು ಶಿಖರವನ್ನೇರುವ ಮೂಲಕ ಮೌಂಟ್‌ ಎವರೆಸ್ಟ್‌ ಏರಿದ ಅತಿ ಹಿರಿಯ ಅಮೆರಿಕನ್‌ ಎನಿಸಿಕೊಂಡಿದ್ದಾರೆ.

ಜತೆಗೆ, ಹಾಂಗ್‌ಕಾಂಗ್‌ನ ಶಿಕ್ಷಕಿಯೊಬ್ಬರು ಎವರೆಸ್ಟ್‌ ಶಿಖರವನ್ನು ಏರಿದ ಅತಿ ವೇಗದ ಮಹಿಳಾ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸದ್ಯ ಈ ಇಬ್ಬರು ಪರ್ವತಾರೋಹಿಗಳು ಭಾನುವಾರ ಶಿಖರದಿಂದ ಸುರಕ್ಷಿತವಾಗಿ ಹಿಂತಿರುಗಿದ್ದಾರೆ.

ADVERTISEMENT

75 ವರ್ಷದ ಅರ್ಥರ್‌ ಮೂರ್‌ ಅವರು ಈ ತಿಂಗಳ ಆರಂಭದಲ್ಲಿ ಚಾರಣವನ್ನು ಕೈಗೊಳ್ಳುವ ಮೂಲಕ 67 ವರ್ಷದ ಅಮೆರಿಕನ್‌ ಬಿಲ್‌ ಬುರ್ಕ್‌ ಅವರ ದಾಖಲೆಯನ್ನು ಮುರಿದಿದ್ದಾರೆ.

ಹಾಂಗ್‌ಕಾಂಗ್‌ನ ಶಿಕ್ಷಕಿ ತ್ಸಾಂಗ್ ಯಿನ್-ಹ್ಯಾಂಗ್ ಅವರು 25 ಗಂಟೆ 50 ನಿಮಿಷಗಳಲ್ಲಿ ಬೇಸ್‌ ಕ್ಯಾಂಪ್‌ನಿಂದ ಮೌಂಟ್‌ ಎವರೆಸ್ಟ್‌ ಚಾರಣವನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಮೌಂಟ್‌ ಎವರೆಸ್ಟ್‌ ಏರಿದ ಅತಿ ವೇಗದ ಮಹಿಳಾ ಪರ್ವತಾರೋಹಿ ಎನಿಸಿಕೊಂಡಿದ್ದಾರೆ.

ಅರ್ಥರ್‌ ಅವರು ತಮ್ಮ 68ನೇ ವಯಸ್ಸಿನಲ್ಲಿ ಪರ್ವತಾರೋಹಣವನ್ನು ಆರಂಭಿಸಿದ್ದಾರೆ. 2019ರಲ್ಲಿ ಮೌಂಟ್‌ ಎವರೆಸ್ಟ್‌ ಚಾರಣ ಕೈಗೊಳ್ಳುವ ಮುನ್ನ ಅವರು ದಕ್ಷಿಣ ಅಮೆರಿಕ ಮತ್ತು ಅಲಸ್ಕಾದಲ್ಲಿ ಚಾರಣವನ್ನು ನಡೆಸಿದ್ದರು. ಆದರೆ 2019ರಲ್ಲಿ ಏಣಿಯಿಂದ ಬಿದ್ದು, ಅವರ ಕಾಲಿಗೆ ಗಾಯವಾಗಿತ್ತು. ಆದರೂ ಛಲ ಬಿಡದ ಅರ್ಥರ್‌ಮತ್ತೊಮ್ಮೆ ಮೌಂಟ್‌ ಎವರೆಸ್ಟ್‌ ಏರಲು ಪ್ರಯತ್ನಿಸಿದ್ದಾರೆ. ಇದಕ್ಕೆ ಯಶಸ್ಸು ಕೂಡ ಸಿಕ್ಕಿದೆ.

ತ್ಸಾಂಗ್ ಯಿನ್-ಹ್ಯಾಂಗ್ ಅವರು 5,300 ಮೀಟರ್‌ ದೂರದಲ್ಲಿರುವ ಬೇಸ್‌ ಕ್ಯಾಂಪ್‌ ಮತ್ತು 8,849 ಮೀಟರ್‌ ಶಿಖರದ ನಡುವೆ ಕೇವಲ ಎರಡು ಬಾರಿ ವಿರಾಮವನ್ನು ತೆಗೆದುಕೊಂಡಿದ್ದಾರೆ.

ಶೆರ್ಪಾ ಮಾರ್ಗದರ್ಶಕ ಲಕ್ಪಾ ಗೆಲು ಅವರು 10 ಗಂಟೆ 56 ನಿಮಿಷದಲ್ಲಿ ಎವರೆಸ್ಟ್‌ ಏರಿದ್ದು, ಇದು ಇದುವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.