ADVERTISEMENT

ಪ್ಯಾರಿಸ್‌ನಿಂದ ತಿಗಣೆಗಳು ದೇಶ ಪ್ರವೇಶಿಸದಂತೆ ದ. ಕೊರಿಯಾದಲ್ಲಿ ಶ್ವಾನದಳ ನಿಯೋಜನೆ

ರಾಯಿಟರ್ಸ್
Published 12 ಆಗಸ್ಟ್ 2024, 9:51 IST
Last Updated 12 ಆಗಸ್ಟ್ 2024, 9:51 IST
<div class="paragraphs"><p>ದಕ್ಷಿಣ ಕೊರಿಯಾದ ಇಂಚನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಿಗಣೆ ತಪಾಸಣೆಯಲ್ಲಿ ತೊಡಗಿರುವ ಕೆಕೊ</p></div>

ದಕ್ಷಿಣ ಕೊರಿಯಾದ ಇಂಚನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಿಗಣೆ ತಪಾಸಣೆಯಲ್ಲಿ ತೊಡಗಿರುವ ಕೆಕೊ

   

ರಾಯಿಟರ್ಸ್ ಚಿತ್ರ

ಇಂಚಾನ್: ದಕ್ಷಿಣ ಕೊರಿಯಾದ ಇಂಚಾನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶ್ವಾನ ದಳವನ್ನು ನಿಯೋಜಿಸಲಾಗಿದ್ದು, ಪ್ಯಾರಿಸ್ ಒಲಿಂಪಿಕ್ಸ್ ಮುಗಿಸಿ ದೇಶಕ್ಕೆ ಮರಳುತ್ತಿರುವ ಕ್ರೀಡಾಪಟುಗಳು, ಕೋಚ್‌ ಹಾಗೂ ಅಭಿಮಾನಿಗಳ ಮೂಲಕ ತಿಗಣೆಗಳು ದೇಶದೊಳಗೆ ನುಸುಳದಂತೆ ಎಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಬೀಗಲ್ ತಳಿಯ ಎರಡು ವರ್ಷದ ನಾಯಿ ಕೆಕೊ ಈ ತಂಡದ ನಾಯಕ. ತಿಗಣೆಗಳು ದೇಹದಿಂದ ಹೊರಸೂಸುವ ಫೆರಮೋನ್‌ಗಳ ವಾಸನೆಯನ್ನು ಗ್ರಹಿಸುವ ತರಬೇತಿ ಪಡೆದ ದೇಶದ ಏಕೈಕ ನಾಯಿ ಕೆಕೊ. ಹೊಟೇಲ್‌ನ ಒಂದು ಕೊಠಡಿಯನ್ನು ಇದು ಕೇವಲ ಎರಡು ನಿಮಿಷಗಳಲ್ಲಿ ತಪಾಸಣೆ ನಡೆಸುವಷ್ಟರ ಮಟ್ಟಿಗೆ ಚುರುಕಾಗಿದೆ ಎಂದು ಸೆಸ್ಕೊ ಎಂಬ ಕೀಟನಿಯಂತ್ರಕ ಕಂಪನಿ ಹೇಳಿದೆ.

ಈ ಕೀಟನಿಯಂತ್ರಕ ಕಂಪನಿಯೊಂದಿಗೆ ದಕ್ಷಿಣ ಕೊರಿಯಾದ ಭದ್ರತೆ ಹಾಗೂ ಸಾರಿಗೆ ಸಚಿವಾಲಯವೂ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ. ಇವರೊಂದಿಗೆ ರೋಗ ನಿಯಂತ್ರಕ ಮತ್ತು ಮುಂಜಾಗ್ರತಾ ಏಜೆನ್ಸಿ, ಇಂಚಾನ್‌ ಏರ್‌ಲೈನ್ಸ್‌ ಮತ್ತು ವಿಮಾನ ನಿಲ್ದಾಣಗಳು ಕೈಜೋಡಿಸಿವೆ. ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರತಿಯೊಬ್ಬರ ತಪಾಸಣೆಯನ್ನು ಈ ತಂಡ ನಡೆಸಲಿದೆ.

ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ಯಾರಿಸ್‌ನಲ್ಲಿ ತಿಗಣೆ ಕಾಟದ ಕುರಿತು ಫ್ರಾನ್ಸ್‌ ರಾಷ್ಟ್ರದಾದ್ಯಂತ ಆತಂಕ ವ್ಯಕ್ತವಾಗಿತ್ತು. ಇವು ದೇಶವ್ಯಾಪಿ ಹರಡುವ ಭೀತಿಯನ್ನು ವ್ಯಕ್ತಪಡಿಸಿದ್ದ ಫ್ರಾನ್ಸ್‌, ಇವುಗಳ ನಿರ್ಮೂಲನೆಗೆ ಅಭಿಯಾನ ನಡೆಸಿತ್ತು.

‘ಒಲಿಂಪಿಕ್ಸ್‌ಗಾಗಿ ಜಗತ್ತಿನ ಹಲವು ರಾಷ್ಟ್ರಗಳಿಂದ ಪ್ಯಾರಿಸ್‌ಗೆ ಜನರು ಬಂದಿದ್ದರು. ಹೀಗೆ ಬಂದವರೊಂದಿಗೆ ತಿಗಣೆಗಳೂ ಪ್ರಯಾಣಿಸಿರುವ ಸಾಧ್ಯತೆಗಳಿವೆ. ಹೀಗಾಗಿ ಇವುಗಳು ದೇಶ ಪ್ರವೇಶಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ದಕ್ಷಿಣ ಕೊರಿಯಾ ಸರ್ಕಾರ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಕೆಕೊ ಹಾಗೂ ಅದರ ತಂಡ ಶುಕ್ರವಾರವೇ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದೆ. ಪ್ಯಾರಿಸ್‌ನಿಂದ ಮರಳುತ್ತಿರುವ ಕ್ರೀಡಾಪಟುಗಳು, ತರಬೇತುದಾರರ ತಪಾಸಣೆ ನಡೆಸುತ್ತಿದೆ. ಇದು ಸೆ. 8ರವರೆಗೂ ಮುಂದುವರಿಯಲಿದೆ ಎಂದು ಸರ್ಕಾರ ಹೇಳಿದೆ.

ಪ್ಯಾರಿಸ್ ಒಲಿಂಪಿಕ್ಸ್‌ಗೆ ದಕ್ಷಿಣ ಕೊರಿಯಾ ಈ ಬಾರಿ 144 ಅಥ್ಲೀಟ್‌ಗಳನ್ನು ಕಳುಹಿಸಿತ್ತು. ಪ್ಯಾರಿಸ್‌ನಿಂದ ದಕ್ಷಿಣ ಕೊರಿಯಾಗೆ ನೇರವಾಗಿ ಬರುವ ವಿಮಾನಗಳಲ್ಲಿ ಪ್ರಯಾಣಿಸಿದವರನ್ನು ಇಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ. ಒಂದೊಮ್ಮೆ ತಿಗಣೆಗಳು ಪತ್ತೆಯಾದರೆ, ವಿಮಾನ ನಿಲ್ದಾಣದ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದೆನ್ನಲಾಗಿದೆ.

2023ರಲ್ಲಿ ದಕ್ಷಿಣ ಕೊರಿಯಾದಲ್ಲಿ ಶಂಕಿತ ಸೋಂಕು ವ್ಯಾಪಿಸಿರುವ ಕುರಿತು ದೊಡ್ಡ ಅಭಿಯಾನವನ್ನೇ ನಡೆದಿತ್ತು. ಇಲ್ಲಿನ ಮೈಕ್ರೊ ಅಪಾರ್ಟ್‌ಮೆಂಟ್‌, ಮೊಟೆಲ್‌ ಕೊಠಡಿಗಳು, ಜಿಂಜಿಲ್‌ಬ್ಯಾಂಗ್ ಎಂಬ ಸ್ಪಾಗಳಲ್ಲಿ ವ್ಯಾಪಕವಾಗಿ ಸೋಂಕು ನಿವಾರಣ ದ್ರಾವಣವನ್ನು ಸಿಂಪಡಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.