ADVERTISEMENT

ಡೆಲ್ಟಾಗಿಂತ ಓಮೈಕ್ರಾನ್‌ ಸೌಮ್ಯ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ: ವರದಿ

ಪಿಟಿಐ
Published 23 ಡಿಸೆಂಬರ್ 2021, 19:32 IST
Last Updated 23 ಡಿಸೆಂಬರ್ 2021, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: ಕೊರೊನಾ ವೈರಾಣುವಿನ ಡೆಲ್ಟಾ ರೂಪಾಂತರ ತಳಿಗೆ ಹೋಲಿಸಿದರೆ ಓಮೈಕ್ರಾನ್‌ ರೂಪಾಂತರ ತಳಿಯ ತೀವ್ರತೆ ಕಡಿಮೆ. ಓಮೈಕ್ರಾನ್‌ ರೂಪಾಂತರ ತಳಿಯಿಂದ ಸೋಂಕಿಗೆ ಒಳಗಾದವರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ ಇದೆ ಎಂದು ಬ್ರಿಟನ್‌ನಲ್ಲಿ ನಡೆದ ಎರಡು ಅಧ್ಯಯನಗಳು ಹೇಳಿವೆ.

ಲಂಡನ್‌ನ ಇಂಪೀರಿಯಲ್‌ ಕಾಲೇಜ್‌ ಮತ್ತು ಎಡಿನ್‌ಬ್ರಾ ವಿಶ್ವವಿದ್ಯಾಲಯ ಈ ಅಧ್ಯಯನ ನಡೆಸಿವೆ.

ಓಮೈಕ್ರಾನ್‌ ಸೋಂಕು ದೃಢಪಟ್ಟವರು ಡೆಲ್ಟಾ ಸೋಂಕಿತರಿಗೆ ಹೋಲಿಸಿದರೆ ಒಂದು ಅಥವಾ ಅದಕ್ಕಿಂತ ರಾತ್ರಿಗಳನ್ನು ಆಸ್ಪತ್ರೆಯಲ್ಲಿ ಕಳೆಯಬೇಕಾದ ಪ್ರಮಾಣವು ಶೇ 40ರಿಂದ ಶೇ 45ರಷ್ಟು ಕಡಿಮೆ ಎಂದು ಇಂಪೀರಿಯಲ್‌ ಕಾಲೇಜಿನ ಅಧ್ಯಯನವು ಹೇಳಿದೆ.

ADVERTISEMENT

ಈ ಹಿಂದೆ ಸೋಂಕಿಗೆ ಒಳಗಾಗದವರಿಗೆ ಹೋಲಿಸಿದರೆ, ಈ ಹಿಂದೆ ಸೋಂಕಿಗೆ ಒಳಗಾಗಿದ್ದು ಮತ್ತೆ ಓಮೈಕ್ರಾನ್‌ ಸೋಂಕು ತಗುಲಿದವರು ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯ ಶೇ 50ರಿಂದ ಶೇ 60ರಷ್ಟು ಕಡಿಮೆ. ಆದರೆ, ಲಸಿಕೆ ಹಾಕಿಸಿಕೊಂಡಿಲ್ಲದವರಿಗೆ ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯ ಹೆಚ್ಚು ಎಂದು ಈ ಅಧ್ಯಯನವು ತಿಳಿಸಿದೆ.

ಓಮೈಕ್ರಾನ್‌ ತಳಿಯ ವಿರುದ್ಧ ಲಸಿಕೆಗಳು ಹೆಚ್ಚು ಪರಿಣಾಮಕಾರಿ ಅಲ್ಲ ಎನ್ನಲಾಗುತ್ತಿದೆ. ಅಲ್ಲದೆ, ಓಮೈಕ್ರಾನ್‌ ಸೋಂಕಿನ ಹರಡುವಿಕೆ ಹೆಚ್ಚು ತೀವ್ರವಾಗಿದೆ. ಇತ್ತೀಚೆಗೆ ಕಂಡಂತೆ, ಹರಡುವಿಕೆ ತೀವ್ರವಾಗಿದ್ದರೆ ಆರೋಗ್ಯ ಸೇವೆಗಳ ಬೇಡಿಕೆ ಭಾರಿ ಪ್ರಮಾಣದಲ್ಲಿ ಹೆಚ್ಚಬಹುದು ಎಂದು ಇಂಪೀರಿಯಲ್‌ ಕಾಲೇಜಿನ ಪ್ರಾಧ್ಯಾಪಕ ನೀಲ್‌ ಫರ್ಗ್ಯೂಸನ್‌ ಹೇಳಿದ್ದಾರೆ. ಓಮೈಕ್ರಾನ್‌ನ 56,000 ಮತ್ತು ಡೆಲ್ಟಾದ 2,69,000 ಪ್ರಕರಣಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅಧ್ಯಯನ ಪ್ರಬಂಧವು ಸಹವರ್ತಿ ಪರಾಮರ್ಶೆಗೆ ಒಳಪಟ್ಟಿಲ್ಲ.

ಡೆಲ್ಟಾ ತಳಿಗೆ ಹೋಲಿಸಿದರೆ ಓಮೈಕ್ರಾನ್‌ ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕಾದ ಸಾಧ್ಯತೆಯು ಮೂರನೇ ಎರಡರಷ್ಟು ಕಡಿಮೆ ಎಂದು ಎಡಿನ್‌ಬ್ರಾ ವಿಶ್ವವಿದ್ಯಾಲಯವು ನಡೆಸಿದ ಇನ್ನೊಂದು ಅಧ್ಯಯನವು ಹೇಳಿದೆ. ಆದರೆ ಈ ಅಧ್ಯಯನಕ್ಕೆ 15 ಸೋಂಕು ಪ್ರಕರಣಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳಲಾಗಿದೆ.

ಸೋಂಕು ಹೆಚ್ಚು ವ್ಯಾಪಕವಾಗಿದ್ದ ದಕ್ಷಿಣ ಆಫ್ರಿಕಾದಿಂದ ಸಿಕ್ಕ ದತ್ತಾಂಶಗಳೂ ಇದನ್ನೇ ಹೇಳುತ್ತಿವೆ. ಇತರ ರೂಪಾಂತರ ತಳಿಗಳಿಗೆ ಹೋಲಿಸಿದರೆ ಓಮೈಕ್ರಾನ್‌ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಬೇಕಾದ ಅಗತ್ಯ ಶೇ 80ರಷ್ಟು ಕಡಿಮೆ. ಓಮೈಕ್ರಾನ್‌ ಸೋಂಕಿಗೆ ಒಳಗಾದ ರೋಗಿಗಳು ಗಂಭೀರ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯು ಡೆಲ್ಟಾ ತಳಿ ಸೋಂಕಿತರಿಗೆ ಹೋಲಿಸಿದರೆ ಶೇ 70ರಷ್ಟು ಕಡಿಮೆ ಎಂದು ಸೋಂಕು ರೋಗಗಳ ರಾಷ್ಟ್ರೀಯ ಸಂಸ್ಥೆಯು ಹೇಳಿದೆ.

ಬೇರೆ ಬೇರೆ ಸಮುದಾಯಗಳಲ್ಲಿ ಸೋಂಕಿನ ತೀವ್ರತೆಯು ಭಿನ್ನವಾಗಿರಬಹುದು. ಹೆಚ್ಚು ವಯಸ್ಸಾದವರಲ್ಲಿ ಪರಿಣಾಮ ಹೇಗಿರುತ್ತದೆ ಎಂಬ ಬಗ್ಗೆ ಪೂರ್ಣ ಅಧ್ಯಯನ ನಡೆದಿಲ್ಲ ಎಂದು ಜಗತ್ತಿನ ವಿವಿಧ ಭಾಗಗಳ ಸಂಶೋಧಕರು ಹೇಳಿದ್ದಾರೆ.

ಚಟುವಟಿಕೆಗಳಿಗೆ ನಿರ್ಬಂಧ

*ಸ್ಪೇನ್‌ನ ಕೆಟಲೋನಿಯಾದಲ್ಲಿ ಶುಕ್ರವಾರದಿಂದ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ. ದೇಶದಲ್ಲಿ ಓಮೈಕ್ರಾನ್ ಪ್ರಕರಣ ಹೆಚ್ಚಳವು ವೇಗ ಪಡೆದಿದ್ದು, ರಾತ್ರಿ ಕರ್ಫ್ಯೂ ವಿಧಿಸಲು ಕೆಟಲೋನಿಯಾ ಆಡಳಿತ ನಿರ್ಧರಿಸಿದೆ. ಇದು ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಮೇಲೆ ಪರಿಣಾಮ ಬೀರಲಿದೆ.

*ಜಗತ್ತಿನ ವಿವಿಧ ದೇಶಗಳಲ್ಲಿ ಓಮೈಕ್ರಾನ್ ಪ್ರಕರಣಗಳು ಕಂಡುಬಂದಿರುವುದರಿಂದ ಪ್ರಸಿದ್ಧ ವಿಮಾನಯಾನ ಸಂಸ್ಥೆ ಲುಫ್ತಾನ್ಸಾ, ಹಲವು ವಿಮಾನಗಳ ಹಾರಾಟವನ್ನು ರದ್ದುಪಡಿಸಲು ನಿರ್ಧರಿಸಿದೆ

*ಗ್ರೀಸ್‌ನಲ್ಲಿ ಕ್ರಿಸ್‌ಮಸ್ ಆಚರಣೆಗಳು ಹಾಗೂ ಬಹಿರಂಗ ಕಾರ್ಯಕ್ರಮಗಳನ್ನು ರದ್ದುಪಡಿಸಲು ಸರ್ಕಾರ ಗುರುವಾರ ನಿರ್ಧರಿಸಿದೆ. ಮಾಸ್ಕ್ ಕಡ್ಡಾಯ ಸೇರಿದಂತೆ ವಿವಿಧ ನಿಯಮಗಳು ಶುಕ್ರವಾರದಿಂದ ಜಾರಿಗೆ ಬರಲಿವೆ.

*ಕ್ರಿಸ್‌ಮಸ್‌ ಮುಗಿದ ತಕ್ಷಣ ಹಲವು ನಿರ್ಬಂಧಗಳನ್ನು ಜಾರಿಗೆ ತರಲು ಸ್ಕಾಟ್ಲೆಂಡ್ ನಿರ್ಧರಿಸಿದೆ. ನೈಟ್‌ಕ್ಲಬ್‌ಗಳನ್ನು ಬಂದ್ ಮಾಡಲು ತೀರ್ಮಾನಿಸಲಾಗಿದ್ದು, ಸೋಮವಾರ ಬೆಳಗಿನ ಜಾವ 5 ಗಂಟೆಯಿಂದ ಈ ಆದೇಶ ಜಾರಿಗೆ ಬರಲಿದೆ

*ಬ್ರಿಟನ್‌ನಲ್ಲಿ ಒಂದು ವಾರದಲ್ಲಿ 12 ಲಕ್ಷ ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ದೇಶದ ಪ್ರತೀ 45 ಜನರ ಪೈಕಿ ಒಬ್ಬ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ತಜ್ಞರು ಹೇಳಿದ್ದಾರೆ‌‌‌

*ಕ್ರಿಸ್‌ಮಸ್ ಆಚರಣೆ ಮುಗಿಯುವವರೆಗೆ ಯಾವುದೇ ಹೊಸ ನಿರ್ಬಂಧಗಳನ್ನು ಜಾರಿಗೆ ತರದಿರಲು ಬ್ರಿಟನ್ ಸರ್ಕಾರ ಗುರುವಾರ ತಿಳಿಸಿದೆ

*ಇಟಲಿಯಲ್ಲಿ ಓಮೈಕ್ರಾನ್ ವೇಗವಾಗಿ ಹರಡುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಾಬಲ್ಯ ಸಾಧಿಸಲಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ ತಿಳಿಸಿದೆ. ಡಿ.6ರಂದು ನಡೆಸಿದ ಸಮೀಕ್ಷೆಯಲ್ಲಿ ಶೇ 0.19ರಷ್ಟಿದ್ದ ಓಮೈಕ್ರಾನ್ ಪ್ರಕರಣ ಪ್ರಮಾಣವು ಡಿ.20ರಂದು ನಡೆಸಿದ ಸಮೀಕ್ಷೆಯಲ್ಲಿ ಶೇ 28ಕ್ಕೆ ಏರಿಕೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.