ಜಿನಿವಾ: ಕೊರೊನಾ ರೂಪಾಂತರ ತಳಿ ಓಮೈಕ್ರಾನ್ ತ್ವರಿತವಾಗಿ ಡೆಲ್ಟಾ ರೂಪಾಂತರವನ್ನು ಹಿಂದಿಕ್ಕುತ್ತಿದೆ ಮತ್ತು ಪ್ರಪಂಚದಾದ್ಯಂತ ಪ್ರಬಲವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.
ರೋಗ ನಿರೋಧಕ ಶಕ್ತಿಯನ್ನು ಓಮೈಕ್ರಾನ್ ತಪ್ಪಿಸಬಲ್ಲದು ಎಂಬುದಕ್ಕೆ ಪುರಾವೆಗಳು ಲಭ್ಯವಾಗುತ್ತಿವೆ. ಆದರೆ, ಇತರ ರೂಪಾಂತರಗಳಿಗೆ ಹೋಲಿಸಿದರೆ ಕಡಿಮೆ ರೋಗದ ತೀವ್ರತೆಯನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೆಲವು ದೇಶಗಳಲ್ಲಿ ಡೆಲ್ಟಾವನ್ನು ಹಿಂದಿಕ್ಕಲು ಓಮೈಕ್ರಾನ್ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಏಕೆಂದರೆ ಅದು ಆ ದೇಶಗಳಲ್ಲಿನ ಡೆಲ್ಟಾ ರೂಪಾಂತರದ ಪರಿಚಲನೆಯ ಮಟ್ಟವನ್ನು ಅವಲಂಬಿಸಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಮಾರಿಯಾ ವ್ಯಾನ್ ಕೆರ್ಖೋವ್ ಹೇಳಿದ್ದಾರೆ.
‘ಉತ್ತಮ ಸೀಕ್ವೆನ್ಸಿಂಗ್ ಪರೀಕ್ಷೆ ಹೊಂದಿರುವ ಎಲ್ಲಾ ದೇಶಗಳಲ್ಲಿ ಓಮೈಕ್ರಾನ್ ಪತ್ತೆಯಾಗಿದೆ. ಆದರೆ, ಪ್ರಪಂಚದಾದ್ಯಂತದ ಎಲ್ಲಾ ದೇಶಗಳಲ್ಲೂ ಈ ಸೋಂಕು ಹರಡಿರಬಹುದು. ಇದು ತ್ವರಿತವಾಗಿ, ಡೆಲ್ಟಾವನ್ನು ಹಿಂದಿಕ್ಕುತ್ತಿದೆ. ಆದ್ದರಿಂದ ಓಮೈಕ್ರಾನ್ ಪ್ರಬಲ ರೂಪಾಂತರವಾಗುತ್ತಿದೆ’ಎಂದು ವರ್ಚುವಲ್ ಪ್ರಶ್ನೆಗಳು ಮತ್ತು ಉತ್ತರಗಳ ಅವಧಿಯಲ್ಲಿ ಕೆರ್ಖೋವ್ ಹೇಳಿದರು.
ಓಮೈಕ್ರಾನ್ ಡೆಲ್ಟಾಕ್ಕಿಂತ ಕಡಿಮೆ ತೀವ್ರತರವಾದ ರೋಗವನ್ನು ಉಂಟುಮಾಡುತ್ತದೆ ಎಂಬ ಕೆಲವು ಮಾಹಿತಿಯಿದ್ದರೂ ಸಹ, ಇದು ಸೌಮ್ಯವಾದ ಊಪಾಂತರವಲ್ಲ. ಏಕೆಂದರೆ ‘ಓಮೈಕ್ರಾನ್ ಸೋಂಕಿತ ಜನರೂ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ’ಎಂದು ಅವರು ಎಚ್ಚರಿಸಿದ್ದಾರೆ.
ಜನವರಿ 3-9ರ ಅವಧಿಯ ಒಂದೇ ವಾರದಲ್ಲಿ ಜಾಗತಿಕವಾಗಿ 1.5 ಕೋಟಿಗೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡ 55 ರಷ್ಟು ಹೆಚ್ಚಾಗಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.
ಅಮೆರಿಕ (4,610,359 ಹೊಸ ಪ್ರಕರಣಗಳು; ಶೇಕಡ 73 ರಷ್ಟು ಹೆಚ್ಚಳ), ಫ್ರಾನ್ಸ್ (1,597,203 ಹೊಸ ಪ್ರಕರಣಗಳು; ಶೇಕಡ 46 ರಷ್ಟು ಹೆಚ್ಚಳ), ಬ್ರಿಟನ್ (1,217,258 ಹೊಸ ಪ್ರಕರಣಗಳು; ಶೇಕಡಾ 10 ರಷ್ಟು ಹೆಚ್ಚಳ) ಇಟಲಿ (1,014,358 ಹೊಸ ಪ್ರಕರಣಗಳು; ಶೇಕಡ 57 ರಷ್ಟು ಹೆಚ್ಚಳ) ಮತ್ತು ಭಾರತ (638,872 ಹೊಸ ಪ್ರಕರಣಗಳು; ಶೇಕಡ 524 ರಷ್ಟು ಹೆಚ್ಚಳ) ದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.