ಇಸ್ಲಾಮಾಬಾದ್: ಗೋಧಿ ಹಿಟ್ಟು ಮತ್ತು ವಿದ್ಯುತ್ ದರ ಏರಿಕೆ ಖಂಡಿಸಿ ಪಾಕಿಸ್ತಾನ–ಆಕ್ರಮಿತ ಕಾಶ್ಮೀರದಲ್ಲಿ ಶನಿವಾರ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ಸಂಘರ್ಷ ಏರ್ಪಟ್ಟಿದೆ.
ಈ ಹಿಂಸಾಚಾರದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ಹತ್ಯೆಯಾಗಿದೆ. ಅಲ್ಲದೆ, 78 ಪೊಲೀಸರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ವಿವಾದಿತ ಪಾಕಿಸ್ತಾನ–ಆಕ್ರಮಿತ ಕಾಶ್ಮೀರ ಪ್ರಾಂತ್ಯದಲ್ಲಿ ಶನಿವಾರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ, ರಸ್ತೆ ತಡೆ ಮಾಡಿ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಈ ವೇಳೆ ಪೊಲೀಸರು ಮತ್ತು ಹೋರಾಟಗಾರರ ಮಧ್ಯೆ ಗಲಾಟೆ ಆರಂಭವಾಯಿತು ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಾಮ್ರಾನ್ ಅಲಿ, ‘ಜಮ್ಮು–ಕಾಶ್ಮೀರ ಜಾಯಿಂಟ್ ಆವಾಮಿ ಆ್ಯಕ್ಷನ್ ಕಮಿಟಿ (ಜೆಎಎಸಿ) ಅಡಿ ಕೈಗೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆ ಕೊಟ್ಲಿ ಮತ್ತು ಪೂಂಛ್ ಜಿಲ್ಲೆಗಳ ಮೂಲಕ ಮುಜಾಫ್ಫರಾಬಾದ್ ಪ್ರವೇಶಿಸದಂತೆ ತಡೆಯಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಇಸ್ಲಾಂಗಢದಲ್ಲಿ ನಡೆದ ಗಲಾಟೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಅದ್ನಾನ್ ಖುರೇಷಿ ಮೃತಪಟ್ಟಿದ್ದಾರೆ’ ಎಂದರು.
ಜೆಎಎಸಿ ಪ್ರತಿಭಟನೆಗೆ ಮುಂದಾಗಿದ್ದರಿಂದಾಗಿ ಬುಧವಾರ ಮತ್ತು ಗುರುವಾರ ಜೆಎಎಸಿಯ ಸುಮಾರು 70 ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇದರಿಂದಾಗಿ ಗುರುವಾರ ಗಂಭೀರ ಸ್ವರೂಪದ ಗಲಾಟೆಯಾಗಿತ್ತು. ಅಲ್ಲದೆ, ಮುಜಾಫ್ಫರಾಬಾದ್‌ನತ್ತ ಮೆರವಣಿಗೆ ಜಾಥಾ ಕೈಗೊಳ್ಳುವ ಮುನ್ನ ದಿನವಾದ ಶುಕ್ರವಾರ ಪ್ರತಿಭಟನೆ ನಡೆಸುವುದಾಗಿ ಜೆಎಎಸಿ ಘೋಷಿಸಿತ್ತು. ಇದರ ಪರಿಣಾಮ ಮುಜಾಫ್ಫರಬಾದ್ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ಗಲಾಟೆಗಳು ನಡೆದಿದ್ದವು.
ಶನಿವಾರ ಮತ್ತಷ್ಟು ಬಿಗಿ ಭದ್ರತೆ ಕೈಗೊಂಡಿದ್ದ ಪೊಲೀಸರು, ಪ್ರತಿಭಟನಕಾರರು ಮುಜಾಫ್ಫರಬಾದ್‌ನತ್ತ ತೆರಳದಂತೆ ಮುಂಜಾಗ್ರತಾ ವಹಿಸಿದ್ದರು. ಜೊತೆಗೆ ಪ್ರತಿಭಟನಕಾರರನ್ನು ಚದುರಿಸಲು ಅಶ್ರುವಾಯು ಶೆಲ್ ಮತ್ತು ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದರು. ಆಗ ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ಮತ್ತು ಬಾಟಲಿಗಳಿಂದ ದಾಳಿ ನಡೆಸಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಜನರ ನ್ಯಾಯಬದ್ಧ ಹಕ್ಕುಗಳನ್ನು ಕೇಳಲು ಹೋರಾಟ ನಡೆಸುವವರ ಹೆಸರಿಗೆ ಮಸಿ ಬಳಿಯಲು ಕೆಲವು ಶಕ್ತಿಗಳು ಇಂಥ ಕೃತ್ಯದಲ್ಲಿ ಭಾಗಿಯಾದಂತೆ ಕಂಡುಬರುತ್ತಿದೆ. ಹಿಂಸಾಚಾರಕ್ಕೂ ಜೆಎಎಸಿಗೂ ಯಾವುದೇ ಸಂಬಂಧ ಇಲ್ಲ.ಹಫೀಜ್ ಹಮ್ದಾನಿ ವಕ್ತಾರ ಜೆಎಎಸಿ
ಯಾವುದೇ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನಾವು ಸದಾ ಕಾಲ ಬಾಗಿಲು ತೆರೆದಿರುತ್ತೇವೆ. ಆದರೆ ಇದನ್ನು ಸರ್ಕಾರದ ದೌರ್ಬಲ್ಯ ಎಂದು ಭಾವಿಸಬಾರದು.ಅಬ್ದುಲ್ ಮಜೀದ್ ಖಾನ್ ಹಣಕಾಸು ಸಚಿವ ಪಾಕಿಸ್ತಾನ ಆಕ್ರಮಿತ ಕಾಶ್ಮೀರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.