ವಾಷಿಂಗ್ಟನ್ : ಅಮೆರಿಕದಲ್ಲಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು ಭಾರಿ ಪ್ರಮಾಣದಲ್ಲಿ ಸಿಬ್ಬಂದಿ ಕಡಿತ ಆರಂಭಿಸಿರುವ ಕಾರಣ ಭಾರತ ಮೂಲದ ವೃತ್ತಿಪರರು ನಿರುದ್ಯೋಗಿಗಳಾಗುತ್ತಿದ್ದಾರೆ. ಎಚ್–1ಬಿ ವೀಸಾ ಹೊಂದಿದವರು ದೇಶದಲ್ಲಿ ಉಳಿದುಕೊಂಡು ಹೊಸ ಉದ್ಯೋಗ ಹುಡುಕುವ ಸಲುವಾಗಿ ನೀಡಲಾಗುವ ಅವಧಿಯನ್ನು ಎರಡು ತಿಂಗಳುಗಳಿಂದ ಒಂದು ವರ್ಷಕ್ಕೆ ವಿಸ್ತರಿಸಬೇಕೆಂದು ಭಾರತ ಮೂಲದ ಅಮೆರಿಕನ್ನರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಭಾರತೀಯ–ಅಮೆರಿಕನ್ನರ ಎರಡು ಸಂಘಟನೆಗಳು ಆನ್‌ಲೈನ್ ಮೂಲಕ ಸಹಿ ಸಂಗ್ರಹ ಅಭಿಯಾನ ಆರಂಭಿಸಿವೆ.
ಪ್ರಸ್ತುತ ಅಮೆರಿಕದಲ್ಲಿರುವ ಕಾನೂನಿನಂತೆ, ಎಚ್–1ಬಿ ವೀಸಾ ಹೊಂದಿದ ವ್ಯಕ್ತಿಯನ್ನು ಕಂಪನಿಯು ಕೆಲಸದಿಂದ ತೆಗೆದು ಹಾಕಿದ ಸಂದರ್ಭದಲ್ಲಿ, ಹೊಸ ಉದ್ಯೋಗ ಹುಡುಕಿಕೊಳ್ಳಲು ಆ ವ್ಯಕ್ತಿಗೆ 60 ದಿನಗಳ ಅವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಹೊಸ ಉದ್ಯೋಗ ಸಿಗದಿದ್ದಲ್ಲಿ, ಆ ವ್ಯಕ್ತಿಯು ದೇಶವನ್ನು ತೊರೆಯಬೇಕಾಗುತ್ತದೆ.
ಈಗಾಗಲೇ, 2,200ಕ್ಕೂ ಅಧಿಕ ಜನರು ಈ ಆನ್‌ಲೈನ್ ಅರ್ಜಿಗೆ ಸಹಿ ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.
‘ಜನವರಿಯಲ್ಲಿ 91 ಸಾವಿರ ಜನರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಬರುವ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಬಹುದು’ ಎಂದು ‘ಲೇಆಫ್‌ಟ್ರ್ಯಾಕ್ ಡಾಟ್‌ಕಾಂ’ ಎಂಬ ಸಂಸ್ಥೆ ಹೇಳಿದೆ.
‘ಈ ಬೆಳವಣಿಗೆ, ವಿಶೇಷವಾಗಿ ಎಚ್–1ಬಿ ವೀಸಾ ಹೊಂದಿದವರ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಉದ್ಯೋಗ ನಷ್ಟವಾದ ದೇಶದಲ್ಲಿ ಉಳಿದುಕೊಳ್ಳಲು ನಂತರ 60 ದಿನಗಳ ಅವಕಾಶ ಇರುತ್ತದೆ. ಆ ಅವಧಿ ಮುಗಿದ ಮೇಲೆ, 10 ದಿನಗಳ ಒಳಗಾಗಿ ಅವರು ಅಮೆರಿಕ ತೊರೆಯಬೇಕಾಗುತ್ತದೆ’ ಎಂದು ಸಂಸ್ಥೆ ಹೇಳಿದೆ.
ವಿಶೇಷ ಪರಿಣತಿ ಅಗತ್ಯವಿರುವ ಹುದ್ದೆಗಳಿಗೆ ವಿದೇಶಿಯರನ್ನು ನೇಮಕ ಮಾಡಿಕೊಳ್ಳಲು ಅಮೆರಿಕ ಕಂಪನಿಗಳಿಗೆ ಅವಕಾಶವಿದೆ. ಇಂಥ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೇರುವವರಿಗೆ ಎಚ್–1ಬಿ ವೀಸಾ ನೀಡಲಾಗುತ್ತದೆ. ಅಮೆರಿಕದಲ್ಲಿರುವ ತಂತ್ರಜ್ಞಾನ ಆಧಾರಿತ ಬಹುತೇಕ ಕಂಪನಿಗಳು ಚೀನಾ ಹಾಗೂ ಭಾರತದ ವೃತ್ತಿಪರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.