ಬೀಜಿಂಗ್: ವುಹಾನ್‌ನಲ್ಲಿ ಕೊರೊನಾ ಸೋಂಕಿನಿಂದಾಗಿ ಲಾಕ್‌ಡೌನ್ ಆದ ಬಳಿಕ ಅಲ್ಲಿನ ಪರಿಸ್ಥಿತಿ ಹೇಗಿತ್ತು ಎನ್ನುವ ಕುರಿತು ಚೀನಾದ ಪ್ರಸಿದ್ಧ ಲೇಖಕಿ ಫಾಂಗ್ ಫಾಂಗ್ (64) ಅವರು ಆನ್‌ಲೈನ್‌ನಲ್ಲಿ ಬರೆಯಲು ಆರಂಭಿಸಿದ ʼವುಹಾನ್ ಡೈರಿʼ ಲಕ್ಷಾಂತರ ಓದುಗರನ್ನು ಸೆಳೆದಿದೆ.
ಆದರೆ ಇದೀಗ ʼವುಹಾನ್ ಡೈರಿʼ ವಿದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ಪ್ರಕಟವಾಗುವುದಕ್ಕೆ ಚೀನಾದಲ್ಲಿಯೇ ವಿರೋಧ ವ್ಯಕ್ತವಾಗುತ್ತಿದೆ.
ಕಮ್ಯುನಿಸ್ಟ್ ಆಡಳಿತವಿರುವ ಚೀನಾದಲ್ಲಿ ಮಾಧ್ಯಮಕ್ಕೆ ಸ್ವಾತಂತ್ರ್ಯ ಇಲ್ಲದೆ ಇರುವುದರಿಂದಾಗಿ, ವುಹಾನ್‌ನಲ್ಲಿನ ನೈಜ ಚಿತ್ರಣ ತಿಳಿಯಲು ಜನರು ʼವುಹಾನ್ ಡೈರಿʼಯನ್ನು ಓದಲಾರಂಭಿಸಿದರು.
ಇದೇ ವೇಳೆ ಅವರ ಬರಹಕ್ಕೆ ಸಾಮಾಜಿಕ ಜಾಲತಾಣ ʼವಿಬೊʼದಲ್ಲಿ ಸಾಕಷ್ಟು ಟೀಕೆಗಳು ಸಹ ವ್ಯಕ್ತವಾಗಿವೆ.
ʼಕೋವಿಡ್ ಪಿಡುಗಿನ ಸ್ಥಿತಿಯನ್ನು ನಿಭಾಯಿಸುವಲ್ಲಿ ಚೀನಾ ವರ್ತಿಸಿದ ರೀತಿಯನ್ನು ಟೀಕಿಸುತ್ತಿರುವ ರಾಷ್ಟ್ರಗಳಿಗೆ ಈ ಕೃತಿ ಮತ್ತಷ್ಟು ಉತ್ತೇಜನ ನೀಡುತ್ತದೆʼ, ʼನಿಮ್ಮ ಡೈರಿಯನ್ನು ಎಷ್ಟು ದುಡ್ಡಿಗೆ ಮಾರಿಕೊಂಡಿರಿ?ʼ, ಚೀನಾ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ಯುದ್ಧ ಮಾಡಲು ನೀವು ಶಸ್ತ್ರಾಸ್ತ್ರ ನೀಡುತ್ತಿದ್ದೀರಿʼ ಎನ್ನುವಂತಹ ಟೀಕೆಗಳನ್ನು ಮಾಡಿದ್ದಾರೆ.
ಹತ್ಯೆ ಬೆದರಿಕೆ:ಚೀನಾದ ವಾರಪತ್ರಿಕೆ ʼಕಿಕ್ಸಿನ್ʼಗೆ ಸಂದರ್ಶನ ನೀಡಿರುವ ಫಾಂಗ್ ಅವರು, ʼನನ್ನ ಮನೆಯ ವಿಳಾಸ ಆನ್‌ಲೈನ್‌ನಲ್ಲಿ ಪ್ರಕಟವಾಗಿದ್ದು, ಹತ್ಯೆ ಬೆದರಿಕೆಗಳು ಬಂದಿವೆʼ ಎಂದು ಹೇಳಿದ್ದಾರೆ.
ಅಮೆರಿಕದ ಪ್ರಕಾಶನ ಸಂಸ್ಥೆ ಹಾರ್ಪರ್‌ಕಾಲಿನ್ಸ್ ಕೃತಿಗೆ ʼವುಹಾನ್ ಡೈರಿʼ ಎಂದೇ ಹೆಸರಿಟ್ಟು ತನ್ನ ವೆಬ್‌ಸೈಟ್‌ನಲ್ಲಿ ಸಂಕ್ಷಿಪ್ತ ವಿವರ ನೀಡಿರುವುದು ಟೀಕಾಕಾರರನ್ನು ಮತ್ತಷ್ಟು ಕೆರಳಿಸಿದೆ. ಜೂನ್ ೩೦ರಿಂದ ಆನ್‌ಲೈನ್‌ನಲ್ಲಿ ಈ ಕೃತಿ ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.