ಮಾಸ್ಕೋ: ರಷ್ಯಾದ ಉತ್ತರ ಕಾಕಸಸ್ ಪ್ರದೇಶದ ಡಾಗೆಸ್ತಾನ್‌ನಲ್ಲಿ ಬಂದೂಕುಧಾರಿಗಳು ಪಾದ್ರಿ ಸೇರಿದಂತೆ 15 ಮಂದಿ ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಿದ್ದಾರೆ ಎಂದು ಅಲ್ಲಿನ ಗವರ್ನರ್ ಸೆರ್ಗೆಯ್ ಮೆಲಿಕೋವ್ ಸೋಮವಾರ ಮುಂಜಾನೆ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಡಾಗೆಸ್ತಾನ್‌ನ ಎರಡು ನಗರಗಳಲ್ಲಿನ ಆರ್ಥೊಡಾಕ್ಸ್ ಚರ್ಚ್‌ಗಳು ಮತ್ತು ಪೊಲೀಸ್ ಪೋಸ್ಟ್ಗಳ ಮೇಲೆ ಬಂದೂಕುಧಾರಿಗಳು ಭಾನುವಾರ ಗುಂಡಿನ ದಾಳಿ ನಡೆಸಿದ್ದಾರೆ. ಇದು ಅತ್ಯಂತ ದುರಂತ ಘಟನೆ' ಎಂದು ಮೆಲಿಕೋವ್ ಹೇಳಿದ್ದಾರೆ.
ಮೃತರಲ್ಲಿ ಪೊಲೀಸ್ ಅಧಿಕಾರಿಗಳ ಜೊತೆಗೆ, 40 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ ಆರ್ಥೊಡಾಕ್ಸ್ ಪಾದ್ರಿ ಸೇರಿದಂತೆ ಹಲವು ನಾಗರಿಕರೂ ಸೇರಿದ್ದಾರೆ ಎಂದು ಮೆಲಿಕೋವ್ ತಿಳಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಡಾಗೆಸ್ತಾನ್ ಸರ್ಕಾರ ಜೂನ್ 24ರಿಂದ 26ರವರೆಗೆ ಶೋಕಾಚರಣೆ ಘೋಷಿಸಿ ಆದೇಶ ಮಾಡಿದೆ. ದಾಳಿಯ ಹೊಣೆಗಾರಿಕೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.
ಭಯೋತ್ಪಾದಕ ಕೃತ್ಯದ ಆರೋಪದ ಮೇಲೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಅಧಿಕಾರಿಗಳು ಈ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದು, ಐವರು ಬಂದೂಕುಧಾರಿಗಳನ್ನು ಹತ್ಯೆಗೈದಿದ್ದಾರೆ ಎಂದು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಸಮಿತಿಯನ್ನು ಉಲ್ಲೇಖಿಸಿ ರಷ್ಯಾದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.