ಢಾಕಾ: ದೇಶದಲ್ಲಿ ಸೃಷ್ಟಿಯಾದ ಅರಾಜಕತೆಗೆ ನಲುಗಿದ ಶೇಖ್ ಹಸೀನಾ ಸೋಮವಾರ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಪಲಾಯನ ಮಾಡಿದ್ದಾರೆ. ಹಸೀನಾ ದೇಶ ಬಿಟ್ಟ ಬಳಿಕವೂ ಕೆಲಕಾಲ ಹಿಂಸಾಚಾರ ಮುಂದುವರಿದಿದ್ದು, 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಹಸೀನಾ ದೇಶ ತೊರೆಯುತ್ತಿದ್ದಂತೆ ಅವರ ನಿವಾಸ ಪ್ರವೇಶಿಸಿದ ಪ್ರತಿಭಟನಕಾರರು ಮನೆಯೊಳಗಿನ ವಸ್ತುಗಳನ್ನು ಕೊಳ್ಳೆಹೊಡೆದಿದ್ದಾರೆ, ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಅವಾಮಿ ಲೀಗ್ ಪಕ್ಷದ ನಾಯಕರ ನಿವಾಸ, ಕಚೇರಿಗೂ ನುಗ್ಗಿ ದಾಂಧಲೆ ನಡೆಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಹಿಂಸಾಚಾರ, ಹಿಂದೂ ದೇವಾಲಯಗಳ ಮೇಲಿನ ದಾಳಿ, ರಾಜಧಾನಿ ಢಾಕಾ ಮತ್ತು ಇತರ ಹಲವಾರು ಸ್ಥಳಗಳಲ್ಲಿ ನಡೆಸಿದ ಲೂಟಿ, ಗಲಾಟೆ ವೇಳೆ 119 ಜನರು ಮೃತಪಟ್ಟಿದ್ದಾರೆ.
ಒಂದೇ ದಿನದಲ್ಲಿ ದೇಶದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆ ಸರ್ಕಾರವನ್ನೇ ಅಲುಗಾಡಿಸಿದೆ. ನೂರಾರು ಸಾವುನೋವುಗಳಿಗೆ ಕಾರಣವಾದ ಪ್ರತಿಭಟನೆ ಇಂದು (ಮಂಗಳವಾರ) ಶಾಂತವಾಗಿದ್ದು, ದೇಶ ಸಹಜ ಸ್ಥಿತಿಯತ್ತ ಮರಳುತ್ತಿದೆ. ಬಸ್ಸುಗಳು ಮತ್ತು ಇತರ ಸಾರ್ವಜನಿಕ ಸಾರಿಗೆಗಳು ಸಂಚಾರ ಆರಂಭಿಸಿವೆ. ವ್ಯಾಪಾರಿಗಳು ಅಂಗಡಿಗಳನ್ನು ತೆರೆಯುತ್ತಿದ್ದಾರೆ. ಸರ್ಕಾರಿ ವಾಹನಗಳು ಕಚೇರಿಗಳಿಗೆ ತೆರಳಿವೆ, ಹಲವು ಬ್ಯಾಟರಿ ಚಾಲಿತ ರಿಕ್ಷಾಗಳು ರಸ್ತೆಗಿಳಿದಿವೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.