ವಾಷಿಂಗ್ಟನ್:2014ರ ಬಳಿಕ ಈವರೆಗೆ ಸುಮಾರು 22 ಸಾವಿರ ಭಾರತೀಯರು ಅಮೆರಿಕದ ಆಶ್ರಯ ಕೋರಿದ್ದಾರೆ ಎಂದು ಅಧಿಕೃತ ಅಂಕಿಅಂಶದಿಂದ ತಿಳಿದುಬಂದಿದೆ.
ಭಾರತೀಯರು ಅಮೆರಿಕದ ಆಶ್ರಯ ಕೋರಲು ನಿರುದ್ಯೋಗ ಮತ್ತು ಅಸಹಿಷ್ಣುತೆ ಕಾರಣ ಎಂದು ‘ಉತ್ತರ ಅಮೆರಿಕ ಪಂಜಾಬಿ ಸಂಘ’ದ ಕಾರ್ಯನಿರ್ವಾಹಕ ನಿರ್ದೇಶಕ ಸತ್‌ನಾಮ್ ಸಿಂಗ್ ಚಾಹಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2014ರ ಬಳಿಕ ಈವರೆಗೆ 22,371 ಭಾರತೀಯರು ಅಮೆರಿಕದ ಆಶ್ರಯ ಕೋರಿದ್ದಾರೆ. ಇದರಲ್ಲಿ 6,935 ಮಹಿಳೆಯರು ಹಾಗೂ 15,436 ಪುರುಷರಿದ್ದಾರೆ. ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆ ರಾಷ್ಟ್ರೀಯ ದಾಖಲೆಗಳ ಕೇಂದ್ರದಿಂದ ‘ಮಾಹಿತಿ ಸ್ವಾತಂತ್ರ್ಯ ಕಾಯ್ದೆ’ ಅನ್ವಯ ಈ ಮಾಹಿತಿ ಪಡೆಯಲಾಗಿದೆ. ಈ ಅಂಕಿಅಂಶವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಚಾಹಲ್ ಹೇಳಿದ್ದಾರೆ.
ಇದನ್ನೂ ಓದಿ:311 ಭಾರತೀಯರ ಗಡಿಪಾರು
ಕಾನೂನುಬಾಹಿರವಾಗಿ ಅಮೆರಿಕ ಪ್ರವೇಶಿಸುವವರಿಗೆ ಆಶ್ರಯ ಪಡೆಯುವ ಪ್ರಕ್ರಿಯೆ ಮತ್ತಷ್ಟು ಕಷ್ಟವಾಗಬಹುದು. ಹೀಗೆ ಬರುವವರು ಅಮೆರಿಕ ಪ್ರವೇಶಿಸಿದ ಬಳಿಕ ಖಾಸಗಿ ವಕೀಲರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಅವರು ಹೆಚ್ಚಿನ ಶುಲ್ಕ ವಿಧಿಸುತ್ತಾರೆ. ಇದರಿಂದ ತೊಂದರೆಗೆ ಸಿಲುಕಬೇಕಾಗಬಹುದು. ಹಿಗಾಗಿ ಆಶ್ರಯ ಕೋರಿ ಬರುವವರು ಕಾನೂನಿಗೆ ಅನುಗುಣವಾಗಿಯೇ ಬರುವುದು ಉತ್ತಮ ಎಂದೂ ಅವರು ಹೇಳಿದ್ದಾರೆ.ಪ್ರಸ್ತುತ, ಚಾಹಲ್ ಅವರು ಆಶ್ರಯ ಕೋರಿ ಅಮೆರಿಕಕ್ಕೆ ಬಂದವರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾನೂನುಬಾಹಿರವಾಗಿ ನೆಲೆಸಿದ್ದ311 ಭಾರತೀಯರನ್ನು ಮೆಕ್ಸಿಕೊದ ವಲಸೆ ಅಧಿಕಾರಿಗಳು ಇತ್ತೀಚೆಗಷ್ಟೇ ಗಡಿಪಾರು ಮಾಡಿದ್ದರು. ಭಾರತೀಯರು ಕಾಯಂ ವಾಸ್ತವ್ಯ ಬಯಸಿ ಮೆಕ್ಸಿಕೊಗೆ ಬಂದಿರಲಿಲ್ಲ. ಗಡಿ ದಾಟಿ ಅಮೆರಿಕಕ್ಕೆ ತೆರಳಲು ಬಯಸಿದ್ದರು ಎಂದು ಅಲ್ಲಿನ ರಾಷ್ಟ್ರೀಯ ವಲಸೆ ಸಂಸ್ಥೆ (ಐಎನ್‌ಎಂ) ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.