ಗಾಜಾ ಪಟ್ಟಿ : ಇಸ್ರೇಲ್‌ನ ಯುದ್ಧ ವಿಮಾನಗಳು ಭಾನುವಾರ ಬೆಳಗಿನ ಜಾವ ಗಾಜಾ ಪಟ್ಟಿಯಲ್ಲಿನ ನಿರಾಶ್ರಿತರ ಶಿಬಿರವನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಕನಿಷ್ಠ 47 ಮಂದಿ ಸತ್ತಿದ್ದು, ಇತರೆ 34 ಮಂದಿ ಗಾಯಗೊಂಡಿದ್ದಾರೆ.
ಹಮಾಸ್ ಆಡಳಿತದ ಪ್ರಾಬಲ್ಯವನ್ನು ಕುಗ್ಗಿಸಲು ತೀವ್ರ ದಾಳಿ ಮುಂದುವರಿಯಲಿದೆ ಎಂಬ ಇಸ್ರೇಲ್ ಹೇಳಿಕೆ ಹಿಂದೆಯೇ ಈ ದಾಳಿ ನಡೆದಿದೆ. ನೊಂದವರಿಗೆ ನೆರವಾಗಲು ದಾಳಿಗೆ ಬಿಡುವು ನೀಡಬೇಕು ಎಂಬ ಅಮೆರಿಕದ ಮನವಿಯನ್ನೂ ಈ ಮೂಲಕ ಕಡೆಗಣಿಸಿದೆ.
ಹಮಾಸ್‌ನ ಆರೋಗ್ಯ ಸಚಿವಾಲಯದ ವಕ್ತಾರರ ಹೇಳಿಕೆಯನ್ನು ಆಧರಿಸಿ, ದಾಳಿಯಿಂದ ಕನಿಷ್ಠ 47ಮಂದಿ ಸತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
‘ಇದು, ನಿಜವಾಗಿ ನರಮೇಧ. ಇಲ್ಲಿದ್ದ ಎಲ್ಲರೂ ಶಾಂತಿಪ್ರಿಯರು. ಒಬ್ಬರಾದರೂ ಪ್ರತಿರೋಧ ತೋರಿರಲಿಲ್ಲ’ ಎಂದು ಶಿಬಿರದಲ್ಲಿದ್ದ ಅರಾಫತ್ ಅಬು ವಾಯುದಾಳಿಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಇಸ್ರೇಲ್‌ನ ದಾಳಿ ಹಾಗೂ ಗಾಜಾಪಟ್ಟಿಯಲ್ಲಿನ ಸಾವುಗಳ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ಹೆಚ್ಚಿದೆ. ಕದನವಿರಾಮ ಘೋಷಿಸಲು ಒತ್ತಾಯಿಸಿ ಶನಿವಾರ ವಾಷಿಂಗ್ಟನ್ ಮತ್ತು ಬರ್ಲಿನ್‌ನಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿವೆ.
ಆದರೆ, ಇಸ್ರೇಲ್ ತನ್ನ ಪಟ್ಟು ಮುಂದುವರಿಸಿದೆ. ದಾಳಿಯ ತೀವ್ರತೆ ತಗ್ಗಿಸಲು ನಿರಾಕರಿಸಿದೆ. ಈ ಪ್ರಾಂತ್ಯದಲ್ಲಿ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು, ದಾಳಿಗೆ ಬಿಡುವು ನೀಡಲು ಕೋರಿದ್ದರು. ಆದರೆ, ‘ಹಮಾಸ್ ತನ್ನ ಸೇನೆಯ ಮೇಲೆ ಪೂರ್ಣ ಬಲದಿಂದ ದಾಳಿ ನಡೆಸುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದ ಇಸ್ರೇಲ್ ಈ ಮನವಿಯನ್ನು ಕಡೆಗಣಿಸಿತ್ತು.
‘ಗಾಜಾ ನಗರದಲ್ಲಿ ಉಳಿದಿರುವ ಪ್ರತಿಯೊಬ್ಬರು ತಮ್ಮ ಜೀವವನ್ನೇ ಅಪಾಯಕ್ಕೆ ದೂಡುತ್ತಿದ್ದಾರೆ’ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ನಗರದ ನಿವಾಸಿಗಳಿಗೆ ಸ್ಪಷ್ಟವಾದ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ಒಂದು ತಿಂಗಳಲ್ಲಿ ಯುದ್ಧದಿಂದಾಗಿ 9,400 ಪ್ಯಾಲೆಸ್ಟೀನಿಯರು ಅಸುನೀಗಿದ್ದಾರೆ.
ಗಾಜಾ ಪಟ್ಟಿ: ಇಸ್ರೇಲ್‌ನ ವಾಯುದಾಳಿ ಮುಂದುವರಿದಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಪ್ಯಾಲೆಸ್ಟೀನ್ ಹಿಡಿತದಲ್ಲಿರುವ ಗಾಜಾಪಟ್ಟಿಗೆ ಭೇಟಿ ನೀಡಿದ್ದು ಪ್ಯಾಲೆಸ್ಟೀನ್ ಅಧ್ಯಕ್ಷರನ್ನು ಭೇಟಿ ಮಾಡಿದರು.
ಅಧ್ಯಕ್ಷ ಮಹಮುದ್ ಅಬ್ಬಾಸ್ ಭೇಟಿ ವೇಳೆ ‘ಗಾಜಾದಿಂದ ಪ್ಯಾಲೆಸ್ಟೀನಿಯರ ಬಲವಂತದ ಸ್ಥಳಾಂತರ ಬೇಡ. ಪ್ಯಾಲೆಸ್ಟೀನಿಯರ ವಿರುದ್ಧ ಮೂಲಭೂತವಾದಿಗಳ ಹಿಂಸೆ ಹತ್ತಿಕ್ಕಬೇಕಾಗಿದೆ ಎಂದರು’ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ಇಸ್ರೇಲ್ –ಪ್ಯಾಲೆಸ್ಟೀನ್ ಬಿಕ್ಕಟ್ಟಿಗೆ ‘ಸಮಗ್ರ ಪರಿಹಾರ’ ಸಿಕ್ಕರಷ್ಟೇ ಗಾಜಾಪಟ್ಟಿಯಲ್ಲಿ ಅಧಿಕಾರ ವಹಿಸಿಕೊಳ್ಳಲಾಗುವುದು ಎಂದು ಪ್ಯಾಲೆಸ್ಟೀನ್ ಅಧ್ಯಕ್ಷ ಮಹಮುದ್ ಅಬ್ಬಾಸ್ ಹೇಳಿದ್ದಾರೆ. ತಮ್ಮನ್ನು ಭೇಟಿಯಾಗಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಅವರಿಗೆ ಈ ಮಾತು ಹೇಳಿದ್ದಾರೆ. ‘ಜೆರುಸಲೇಂ ಪೂರ್ವ ಮತ್ತು ಗಾಜಾ ಪಟ್ಟಿ ಒಳಗೊಂಡ ವೆಸ್ಟ್‌ಬ್ಯಾಂಕ್‌ಗೆ ಸಮಗ್ರ ರಾಜಕೀಯ ಪರಿಹಾರ ಬೇಕಾಗಿದೆ‘ ಎಂದು ಅಬ್ಬಾಸ್ ಹೇಳಿದ್ದಾರೆ.
ಗಾಜಾ: ಇಸ್ರೇಲ್‌ನ ಸೇನೆ ಗಾಜಾ ನಗರಗಳನ್ನು ಪ್ರವೇಶಿಸುತ್ತಿದ್ದಂತೆ ಜನರಿಗೆ ಬದುಕು ದುಸ್ತರವಾಗುತ್ತಿದೆ.ನಿತ್ಯ ಅವಶೇಷಗಳಿಂದ ಶವಗಳ ಹೊರತೆಗೆಯುವ ಜೊತೆಗೆ ನಿತ್ಯದ ಆಹಾರ ನೀರಿಗೆ ಹುಡುಕಾಟ ನಡೆಸುವುದೇ ಕಾಯಕವಾಗಿದೆ. ಇಸ್ರೇಲ್ ಸೇನೆಗಳು ಇತ್ತೀಚೆಗೆ ನಿರಾಶ್ರಿತರ ಶಿಬಿರ ಜನರು ಆಶ್ರಯ ಪಡೆದಿರುವ ಶಾಲೆಗಳ ಗುರಿಯಾಗಿಸಿ ದಾಳಿ ಮಾಡುತ್ತಿವೆ.
ಗಾಜಾಪಟ್ಟಿಯಲ್ಲಿ ಆಹಾರಕ್ಕಾಗಿ ಜನರ ಬೇಡಿಕೆ ತೀವ್ರವಾಗುತ್ತಿದೆ. ಸದ್ಯ ಬೇಡಿಕೆಯನ್ನು ಈಡೇರಿಸಲು ಆಗುತ್ರಿಲ್ಲ ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮದ (ಡಬ್ಲ್ಯುಎಫ್‌ಪಿ) ಮುಖ್ಯಸ್ಥೆ ಸಿಂಡಿ ಮೆಕೇನ್ ಕೈರೊದಲ್ಲಿ ಹೇಳಿದ್ದಾರೆ. ಪ್ರಸ್ತುತ ಆಹಾರ ಸೇರಿದಂತೆ ಪರಿಹಾರ ಸಾಮಗ್ರಿಗಳುಳ್ಳ ಟ್ರಕ್‌ಗಳು ರಫಾ ಗಡಿಯ ಮೂಲಕ ಗಾಜಾವನ್ನು ಪ್ರವೇಶಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.