ಲಾಹೋರ್: ಪ್ರಧಾನಿ ಇಮ್ರಾನ್‌ಖಾನ್ ಸರ್ಕಾರವನ್ನು ಪದಚ್ಯುತಿಗೊಳಿಸುವ ಸಂಬಂಧ ಪ್ರತಿಭಟನಾ ರ‍್ಯಾಲಿ ನಡೆಸಲು ಮುಂದಾಗಿದ್ದ ವಿರೋಧ ಪಕ್ಷಗಳ ಒಕ್ಕೂಟದ 450 ಕಾರ್ಯಕರ್ತರನ್ನು ಲಾಹೋರ್ ಹಾಗೂ ಪಂಜಾಬ್ ಪ್ರಾಂತ್ಯದಲ್ಲಿ ಬಂಧಿಸಲಾಗಿದೆ.
ಇಮ್ರಾನ್ ಖಾನ್ ಸರ್ಕಾರವನ್ನು ಪದಚ್ಯುತಿಗೊಳಿಸುವುದಕ್ಕಾಗಿ 11 ಪ್ರಮುಖ ವಿರೋಧಪಕ್ಷಗಳು ಒಟ್ಟಾಗಿ ಪಾಕಿಸ್ತಾನ ಪ್ರಜಾಸತ್ತಾತ್ಮಕ ಚಳವಳಿ(ಪಿಡಿಎಂ) ರಚಿಸಿಕೊಂಡಿವೆ.
ಈ ಮೂಲಕ ಪಾಕಿಸ್ತಾನದಾದ್ಯಂತ ಸರ್ಕಾರದ ವಿರುದ್ಧ ಮೂರು ಹಂತಗಳಲ್ಲಿ ಹೋರಾಟ ನಡೆಸಲು ಕಾರ್ಯಯೋಜನೆ ರೂಪಿಸಿವೆ. ಜನವರಿ 2021ರಲ್ಲಿ ಇಸ್ಲಾಮಾಬಾದ್‌ಗೆ ’ನಿರ್ಣಾಯಕ ದೀರ್ಘ ಪಾದಯಾತ್ರೆ’ ಆಯೋಜಿಸಿದ್ದ ಈ ಒಕ್ಕೂಟ, ಅದಕ್ಕೂ ಮುನ್ನ ದೇಶದ ವಿವಿಧೆಡೆಸಾರ್ವಜನಿಕ ಸಭೆಗಳು, ಪ್ರತಿಭಟನಾ ಮೆರವಣಿಗೆ ಮತ್ತು ರ್‍ಯಾಲಿಗಳನ್ನು ಆಯೋಜಿಸಿದೆ.
ಈ ಯೋಜನೆಯ ಭಾಗವಾಗಿ ಶುಕ್ರವಾರ (ಅ.16) ಗುಜ್ರನ್ವಾಲ ನಗರದಲ್ಲಿ ಬೃಹತ್ ರ‍್ಯಾಲಿ ಆಯೋಜಿಸಲಾಗಿದೆ. ಆದರೆ ಈ ಪ್ರತಿಭಟನಾ ರ‍್ಯಾಲಿಗೆ ಮುನ್ನವೇ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಈ ಪ್ರತಿಭಟನಾ ಮೆರವಣಿಗೆಯ ನಂತರ ಅ.18ರಂದು ಕರಾಚಿ, 25ರಂದು ಕ್ವೆಟ್ಟಾ, ನ.22 ರಂದು ಪೆಶಾವರ, 30ರಂದು ಮುಲ್ತಾನ ಹಾಗೂ ಡಿ.13ರಂದು ಲಾಹೋರ್‌ನಲ್ಲಿ ಪ್ರತಿಭಟನೆಯನ್ನು ನಡೆಸಲು ಪಿಡಿಎಂ ತೀರ್ಮಾನಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.