ವಾಷಿಂಗ್ಟನ್: ಭಾರತೀಯ ಮೂಲದ 30ಕ್ಕೂ ಅಧಿಕ ಮಂದಿ ಅಮೆರಿಕದಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯ ಶಾಸನಸಭೆಗಳ ಚುನಾವಣಾ ಕಣದಲ್ಲಿದ್ದಾರೆ. ಇದು ಅಮೆರಿಕ ರಾಜಕಾರಣದ ಮುಖ್ಯವಾಹಿನಿಯ ಭಾಗವಾಗಲು ಭಾರತೀಯ ಅಮೆರಿಕನ್ನರಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ತೋರಿಸುತ್ತದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರತೀಯ ಅಮೆರಿಕನ್ನರು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿದಿರುವ ರಾಜ್ಯವೆಂದರೆ ಕ್ಯಾಲಿಫೋರ್ನಿಯಾ. ಅದ್ಲಾ ಚಿಸ್ತಿ ಅವರು ಡಿಸ್ಟ್ರಿಕ್ಟ್11ರಲ್ಲಿ ಕೌಂಟಿ ಸೂಪರ್‌ವೈಸರ್ ಸ್ಥಾನಕ್ಕೆ ಹಾಗೂ ಆಲಿಯಾ ಚಿಸ್ತಿ ಅವರು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಸಿಟಿ ಕಾಲೇಜ್ ಬೋರ್ಡ್ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ದರ್ಶನಾ ಪಟೇಲ್ ಅವರು ರಾಜ್ಯ ಶಾಸನಸಭೆಗೆ ಕಣದಲ್ಲಿದ್ದಾರೆ.
ನಿಕೋಲ್ ಫೆರ್ನಾಂಡೆಜ್ (ಸ್ಯಾನ್ ಮಟೆವೊ ಸಿಟಿ ಕೌನ್ಸಿಲ್), ನಿತ್ಯಾ ರಾಮನ್ (ಲಾಸ್ ಏಂಜಲೀಸ್ ಸಿಟಿ ಕೌನ್ಸಿಲ್), ರಿಚಾ ಆವಸ್ತಿ (ಫಾಸ್ಟರ್ ಸಿಟಿ ಕೌನ್ಸಿಲ್) ಮತ್ತು ಸುಖ್‌ದೀಪ್ ಕೌರ್ (ಎಮೆರ್‌ವಿಲ್ ಸಿಟಿ ಕೌನ್ಸಿಲ್) ಅವರು ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ತಾರಾ ಶ್ರೀಕೃಷ್ಣನ್ ಅವರು ಕ್ಯಾಲಿಫೋರ್ನಿಯಾ ರಾಜ್ಯ ಶಾಸನಸಭೆಗೆ ಆಯ್ಕೆ ಬಯಸಿ ಡಿಸ್ಟ್ರಿಕ್ಟ್ 26ರಿಂದ ಸ್ಪರ್ಧಿಸುತ್ತಿದ್ದಾರೆ. ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಸುಮಾರು 9 ಲಕ್ಷದಷ್ಟು ಭಾರತೀಯ ಅಮೆರಿಕನ್ನರು ನೆಲೆಸಿದ್ದಾರೆ.
ಅರಿಜೋನಾದಿಂದ ಪ್ರಿಯಾ ಸುಂದರೇಶನ್ ಹಾಗೂ ಪೆನ್ಸಿಲ್ವೇನಿಯಾದಿಂದ ಆನಂದ್ ಪಾಠಕ್, ಅನ್ನಾ ಥಾಮಸ್, ಅರವಿಂದ್ ವೆಂಕಟ್ ಮತ್ತು ನಿಕಿಲ್ ಅವರು ರಾಜ್ಯ ಶಾಸನಸಭೆಗೆ ಆಯ್ಕೆ ಬಯಸಿದ್ದಾರೆ.
ಒಹಿಯೊ, ನ್ಯೂಯಾರ್ಕ್, ಟೆಕ್ಸಾಸ್ ಮತ್ತು ವಾಷಿಂಗ್ಟನ್‌ನಲ್ಲೂ ಸ್ಥಳೀಯ ಸಂಸ್ಥೆ ಮತ್ತು ರಾಜ್ಯ ಶಾಸನಸಭೆಗೆ ಆಯ್ಕೆ ಬಯಸಿ ಹಲವು ಭಾರತೀಯ ಅಮೆರಿಕನ್ನರು ಕಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.