ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಆಯ್ಕೆ ಮಾಡುವಂತೆ ಕೋರಿ ಭಾರತದಾದ್ಯಂತ 25 ಲಕ್ಷಕ್ಕೂ ಹೆಚ್ಚು ದೂರವಾಣಿ ಕರೆ ಮಾಡಲು ಅಮೆರಿಕದಲ್ಲಿರುವ ‘ಬಿಜೆಪಿಯ ಸಾಗರೋತ್ತರ ಸ್ನೇಹಿತರು’ (ಒಎಫ್‌ಬಿಜೆಪಿ) ಎಂಬ ಸಂಘಟನೆಯು ವಿಸ್ತೃತ ಯೋಜನೆಯನ್ನು ರೂಪಿಸಿದೆ.
‘ಮೋದಿ ಅವರನ್ನು ಮರು ಆಯ್ಕೆ ಮಾಡಬೇಕು. ಅಲ್ಲದೇ, ಬಿಜೆಪಿ ನೇತೃತ್ವದ ಮೈತ್ರಿಕೂಟ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವಂತೆ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಿಕೊಳ್ಳಲಾಗುವುದು’ ಎಂದು ಸಂಘಟನೆಯ ಅಧ್ಯಕ್ಷ ಅಡಪ ಪ್ರಸಾದ್ ಹೇಳಿದ್ದಾರೆ.
‘ಸಂಘಟನೆಯ 3 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಚುನಾವಣಾ ಪ್ರಚಾರಕ್ಕಾಗಿ ಭಾರತಕ್ಕೆ ಕಳುಹಿಸಲಾಗುವುದು. ಈ ಪ್ರತಿನಿಧಿಗಳು ವಿವಿಧ ಹುದ್ದೆ. ಜವಾಬ್ದಾರಿಗಳನ್ನು ನಿರ್ವಹಿಸಿ, ಪಕ್ಷ ಹಾಗೂ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವರು‘ ಎಂದೂ ಅವರು ತಿಳಿಸಿದರು.
‘ನಾವು ಡಿಸೆಂಬರ್‌ನಿಂದಲೇ ಯೋಜನೆಯ ಸಿದ್ಧತೆ ಪ್ರಾರಂಭಿಸಿದ್ದೇವೆ. ಈ ತಿಂಗಳು ಸಿದ್ಧತೆಗೆ ವೇಗ ನೀಡಿದ್ದು, ಅಮೆರಿಕದಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ‘ ಎಂದು ತಿಳಿಸಿದರು.
ಪ್ರಾದೇಶಿಕ ಭಾಷೆಗಳಲ್ಲೂ ಕಾಲ್‌ಸೆಂಟರ್: ‘ಈ ಪ್ರಚಾರ ಕಾರ್ಯಕ್ಕಾಗಿ ಭಾರತದಲ್ಲಿ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾಲ್ ಸೆಂಟರ್ ಸ್ಥಾಪಿಸಲಾಗುವುದು. ಆಯಾ ಪ್ರಾದೇಶಿಕ ಭಾಷೆಗಳಲ್ಲಿಯೇ ಜನರನ್ನು ಸಂಪರ್ಕಿಸಿ, ಮೋದಿ ಅವರನ್ನು ಮತ್ತೊಮ್ಮೆ ಯಾಕೆ ಆಯ್ಕೆ ಮಾಡಬೇಕು ಎಂಬ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ. ಈ ಕಾರ್ಯದಲ್ಲಿ ಕೈಜೋಡಿಸುವಂತೆ, ಇಲ್ಲಿರುವ ಭಾರತೀಯರನ್ನು ಸಹ ಒತ್ತಾಯಿಸುತ್ತೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.