ADVERTISEMENT

‘ಗಾಬ್ಲಿನ್‌ ಮೋಡ್‌’ ವರ್ಷದ ಪದ: ಆನ್‌ಲೈನ್‌ ಮತದಾನದ ಮೂಲಕ ಜನರಿಂದ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 13:23 IST
Last Updated 5 ಡಿಸೆಂಬರ್ 2022, 13:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: 2022ರ ವರ್ಷದ ಪದವಾಗಿ ‘ಗಾಬ್ಲಿನ್‌ ಮೋಡ್‌’ (goblin mode) ಪದವನ್ನು ಆನ್‌ಲೈನ್‌ ಮತದಾನದ ಮೂಲಕ ಜನರು ಆಯ್ಕೆ ಮಾಡಿದ್ದಾರೆ ಎಂದು ಆಕ್ಸ್‌ಫರ್ಡ್‌ ಡಿಕ್ಷನರೀಸ್‌ ಸೋಮವಾರ ಘೋಷಿಸಿದೆ.

‘ಅಳುಕಿಲ್ಲದೆ ಸ್ವಹಿತಾಸಕ್ತಿಯಲ್ಲಿ ತೊಡಗಿರುವ, ಸೋಮಾರಿ, ಅಸಡ್ಡೆ ಅಥವಾ ದುರಾಸೆ ಹೊಂದಿರುವ ಮತ್ತು ಸಾಮಾಜಿಕ ಕಟ್ಟುಪಾಡು, ನಿರೀಕ್ಷೆಗಳನ್ನು ತಿರಸ್ಕರಿಸುವ’ ಎಂಬ ಅರ್ಥವನ್ನುಈ ನುಡಿಗಟ್ಟು ನೀಡುತ್ತದೆ ಎಂದು ಆಕ್ಸ್‌ಫರ್ಡ್‌ ಡಿಕ್ಷನರೀಸ್‌ ವಿವರಿಸಿದೆ.

ಈ ನುಡಿಗಟ್ಟು 2009ರಲ್ಲಿ ಮೊದಲ ಬಾರಿಗೆ ಬಳಕೆಗೆ ಬಂದಿತು. ಕೋವಿಡ್‌ ಸಾಂಕ್ರಾಮಿಕದ ಕಾರಣ ಜಗತ್ತಿನಾದ್ಯಂತ ಲಾಕ್‌ಡೌನ್‌ ಹೇರಿದ್ದರಿಂದ ಉಂಟಾದ ಅನಿಶ್ಚಿತತೆಯಿಂದಾಗಿ 2022ರಲ್ಲಿ ಈ ಪದ ಹೆಚ್ಚು ಜನಪ್ರಿಯತೆ ಪಡೆಯಿತು ಎನ್ನಲಾಗಿದೆ.

ADVERTISEMENT

ಕಳೆದ 12 ತಿಂಗಳಲ್ಲಿ ಜನರು ಹೊಂದಿದ್ದ ಹುರುಪು, ಅನ್ಯಮನಸ್ಕತೆ ಅಥವಾ ಮನಸ್ಥಿತಿಯನ್ನು ‘ವರ್ಷದ ಪದ’ವು ಬಿಂಬಿಸುತ್ತದೆ. ಇದೇ ಮೊದಲ ಬಾರಿಗೆ ವರ್ಷದ ಪದವನ್ನು ಸಾರ್ವಜನಿಕರ ಮತದ ಮೂಲಕ ಆಯ್ಕೆ ಮಾಡಲಾಗಿದೆ. ಗಾಬ್ಲಿನ್‌ ಮೋಡ್‌, ಮೆಟಾವರ್ಸ್‌ ಮತ್ತು ಹ್ಯಾಷ್‌ಟ್ಯಾಗ್‌ ಐಸ್ಟಾಂಡ್‌ವಿತ್‌ ಪದಗಳಲ್ಲಿ ಒಂದನ್ನು ಆಯ್ಕೆ ಮಾಡಲು ಆಕ್ಸ್‌ಫರ್ಡ್‌ ಭಾಷೆಗಳ ನಿಘಂಟುಕಾರರು ಆಯ್ಕೆ ಸೂಚಿಸಿದ್ದರು. ಅವುಗಳಲ್ಲಿ ಗಾಬ್ಲಿನ್‌ ಮೋಡ್‌ ಅತಿ ಹೆಚ್ಚು ಅಂದರೆ, 3,40,000 ಮತಗಳನ್ನು ಪಡೆಯಿತು ಎಂದು ಆಕ್ಸ್‌ಫರ್ಡ್‌ ಲ್ಯಾಗ್ವೇಜಸ್ ಅಧ್ಯಕ್ಷ ಕಾಸ್ಪರ್‌ ಗ್ರೋತ್‌ವೋಲ್‌ ತಿಳಿಸಿದರು.

2021ರಲ್ಲಿ ‘ವ್ಯಾಕ್ಸ್‌’ (vax) ಎಂಬ ಪದವು ವರ್ಷದ ಪದ ಎನಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.