ADVERTISEMENT

ಇಮ್ರಾನ್‌ ಖಾನ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ: 6 ಸಾವು, ಕಂಡಲ್ಲಿ ಗುಂಡು ಆದೇಶ

ಪಿಟಿಐ
Published 26 ನವೆಂಬರ್ 2024, 9:07 IST
Last Updated 26 ನವೆಂಬರ್ 2024, 9:07 IST
<div class="paragraphs"><p>ಪಾಕಿಸ್ತಾನದಲ್ಲಿ ಹಿಂಸಾಚಾರ</p></div>

ಪಾಕಿಸ್ತಾನದಲ್ಲಿ ಹಿಂಸಾಚಾರ

   

–ಪಿಟಿಐ ಚಿತ್ರ

ಇಸ್ಲಾಮಾಬಾದ್‌: ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಪ್ಯಾರಾ ಮಿಲಿಟರಿ ಪಡೆಯ ನಾಲ್ವರು ಯೋಧರು, ಇಬ್ಬರು ಪೊಲೀಸರು ಸೇರಿದಂತೆ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. ನೂರಕ್ಕೂ ಅಧಿಕ ಯೋಧರು ಗಾಯಗೊಂಡಿದ್ದಾರೆ.

ADVERTISEMENT

ಉದ್ರಿಕ್ತ ಪರಿಸ್ಥಿತಿಯನ್ನು ನಿಯಂತ್ರಿಸಲು ರಾಜಧಾನಿಗೆ ಸೇನೆಯನ್ನು ನಿಯೋಜಿಸಿದ್ದು ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿದೆ.

ಜೈಲಿನಲ್ಲಿರುವ ಇಮ್ರಾನ್‌ ಖಾನ್‌ ಬಿಡುಗಡೆಗೆ ಆಗ್ರಹಿಸಿ ಪಾಕಿಸ್ತಾನ್‌ ತೆಹ್ರೀಕ್‌–ಎ–ಇನ್ಸಾಫ್‌ (ಪಿಟಿಐ) ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಪರಿಣಾಮ ಹಿಂಸಾಚಾರ ಭುಗಿಲೆದ್ದಿದೆ. 

ಇಸ್ಲಾಮಾಬಾದ್‌ನ ಶ್ರೀನಗರ ಹೆದ್ದಾರಿಯಲ್ಲಿ ಸೋಮವಾರ ತಡರಾತ್ರಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪಾಕಿಸ್ತಾನದ ನಾಲ್ವರು ರೇಂಜರ್ಸ್‌ಗಳು ಮೃತಪಟ್ಟಿದ್ದಾರೆ. ಐವರು ರೇಂಜರ್ಸ್‌ಗಳು ಹಾಗೂ ಹಲವು ಪೊಲೀಸ್‌ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ರೇಡಿಯೊ ಪಾಕಿಸ್ತಾನ ತಿಳಿಸಿದೆ.

ಈ ಸ್ಥಳದಿಂದ ಸುಮಾರು ಐದು ಕಿ.ಮೀ. ದೂರದಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಹೊಂದಿದ್ದ ದುಷ್ಕರ್ಮಿಗಳು ರೇಂಜರ್ಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ರಾವಲ್ಪಿಂಡಿಯ ಚುಂಗಿ ನಂಬರ್‌ 26ರಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ರೇಡಿಯೊ ಪಾಕಿಸ್ತಾನ ತಿಳಿಸಿದೆ. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ. ಆದರೆ, ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ಇಸ್ಲಾಮಾಬಾದ್‌ ಹೊರವಲಯದ ಹಕ್ಲಾ ಇಂಟರ್‌ಚೇಂಜ್‌ನಲ್ಲಿ ಪ್ರತಿಭಟನಕಾರರೊಂದಿಗೆ ಸೋಮವಾರ ನಡೆದ ಘರ್ಷಣೆಯಲ್ಲಿ ಪೊಲೀಸರೊಬ್ಬರು ಮೃತಪಟ್ಟಿದ್ದಾರೆ ಎಂದು ಪಂಜಾಬ್‌ ಪೊಲೀಸರು ತಿಳಿಸಿದ್ದಾರೆ. ಆದರೆ, ಮತ್ತೊಬ್ಬ ಪೊಲೀಸ್‌ ಸಾವಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಚಿಂತಾಜನಕ: ‘ಪ್ರತಿಭಟನಕಾರರು ತೂರಿದ ಕಲ್ಲು ಹಿರಿಯ ಪೊಲೀಸ್‌ ಅಧಿಕಾರಿ ತಲೆಗೆ ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಗೃಹ ಸಚಿವ ಮೊಹ್ಸಿನ್‌ ನಖ್ವಿ ತಿಳಿಸಿದ್ದಾರೆ.

‘ಅಧಿಕಾರಿಗಳಿಂದ ಹಿಂಸಾಚಾರ’

‘ತಮ್ಮ ಕಾರ್ಯಕರ್ತರ ವಿರುದ್ಧ ಅಧಿಕಾರಿಗಳು ಹಿಂಸಾಚಾರ ನಡೆಸುತ್ತಿದ್ದಾರೆ’ ಎಂದು ಪಿಟಿಐ ಆರೋಪಿಸಿದೆ. ‘ಕನಿಷ್ಠ ಇಬ್ಬರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ’ ಎಂದು ಪಿಟಿಐ ವಕ್ತಾರರು ಬಿಬಿಸಿ ಉರ್ದುಗೆ ತಿಳಿಸಿದ್ದಾರೆ. ಆದರೆ ಇದು ಇತರ ಮೂಲಗಳಿಂದ ದೃಢಪಟ್ಟಿಲ್ಲ.

ಕೆಟ್ಟ ರಾಜಕೀಯ ಕಾರ್ಯಸೂಚಿಗಾಗಿ ರಕ್ತಪಾತವು ಸ್ವೀಕಾರರ್ಹವಲ್ಲ. ರೇಂಜರ್ಸ್‌ ಪೊಲೀಸರ ಮೇಲಿನ ದಾಳಿ ಖಂಡನೀಯ.
–ಶೆಹಬಾಜ್ ಷರೀಪ್‌, ಪಾಕಿಸ್ತಾನದ ಪ್ರಧಾನಿ

ಇಮ್ರಾನ್‌ ಖಾನ್‌ ಬೆಂಬಲಿಗರ ಪ್ರತಿಭಟನೆ

ಇಮ್ರಾನ್‌ ಖಾನ್‌ ಬೆಂಬಲಿಗರ ಪ್ರತಿಭಟನೆ

ಪಾಕಿಸ್ತಾನದಲ್ಲಿ ಹಿಂಸಾಚಾರ

ಪಾಕಿಸ್ತಾನದಲ್ಲಿ ಹಿಂಸಾಚಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.