ಇಸ್ಲಾಮಾಬಾದ್:ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 24ರ ಒಳಗೆ ನ್ಯಾಯಾಲಯದ ಮುಂದೆ ಹಾಜರಾಗದಿದ್ದರೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಘೋಷಿತ ಅಪರಾಧಿ ಎಂದು ಆದೇಶ ಹೊರಡಿಸಲಾಗುವುದು ಇಸ್ಲಾಮಾಬಾದ್ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಅಲ್ ಅಜೀಜಿಯಾ ಸ್ಟೀಲ್ ಮಿಲ್ ಮತ್ತು ಅವೆನ್‌ಫೀಲ್ಡ್ ಪ್ರಕರಣ ಸಂಬಂಧನವಾಜ್ ಷರೀಫ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
‘ನ್ಯಾಯಾಲಯವು ಷರೀಫ್ ವಿರುದ್ದ ಜಾರಿಗೊಳಿಸಿರುವ ಜಾಮೀನು ರಹಿತ ವಾರಂಟ್ ಅನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಎಲ್ಲಾ ಯತ್ನಗಳನ್ನು ಮಾಡಲಾಗುತ್ತಿದೆ’ ಎಂದು ಹೈಕಮಿಷನ್ ಕಚೇರಿಯ ರಾಜತಾಂತ್ರಿಕ ಅಧಿಕಾರಿಗಳು ಅಕ್ಟೋಬರ್ 7ರಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದರು.
ಘೋಷಿತ ಅಪರಾಧಿ ಎಂದು ಆದೇಶ ಹೊರಡಿಸಿದರೆ ಷರೀಫ್ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಕಳೆದ ವರ್ಷ ನವೆಂಬರ್‌ನಿಂದ ಷರೀಫ್ ಅವರು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಎಂಟು ವಾರಗಳ ಕಾಲ ಲಂಡನ್‌ಗೆ ತೆರಳಲು ನ್ಯಾಯಾಲಯ ಮತ್ತು ಸರ್ಕಾರ ಅನುಮತಿ ನೀಡಿತ್ತು. ಆದರೆ, ಅವರು ಹಿಂತಿರುಗಲಿಲ್ಲ.
ಷರೀಫ್ ಅವರು ಗುಣಮುಖರಾಗುತ್ತಿದ್ದಾರೆ ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.