ಲಾಹೋರ್ : ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಜೀವ ಇನ್ನೂ ಅಪಾಯದಲ್ಲಿದೆ. ಅಟಕ್ ಜೈಲಿನಲ್ಲಿ ಅವರಿಗೆ ನೀಡುವ ಆಹಾರದಲ್ಲಿ ವಿಷ ಬೆರೆಸುವ ಆತಂಕ ಇದೆ ಎಂದು ಅವರ ಪತ್ನಿ ಬುಶ್ರಾ ಬೀಬಿ ಆರೋಪಿಸಿದ್ದಾರೆ.
ಪಂಜಾಬ್ ಗೃಹ ಕಾರ್ಯದರ್ಶಿಗೆ ಶನಿವಾರ ಪತ್ರ ಬರೆದಿರುವ ಬುಶ್ರಾ, ‘ಪತಿಯನ್ನು ಅಟಕ್ ಜೈಲಿನಿಂದ ರಾವಲ್ಪಿಂಡಿಯ ಅಡಿಯಾಲ ಕಾರಾಗೃಹಕ್ಕೆ ಸ್ಥಳಾಂತರಿಸಲು ನ್ಯಾಯಾಲಯ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಕಾನೂನು ಪ್ರಕಾರ ಅವರನ್ನು ಅಡಿಯಾಲ ಜೈಲಿಗೆ ವರ್ಗಾಯಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಇಮ್ರಾನ್ ಅವರ ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನ ಪರಿಗಣಿಸಿ ಜೈಲಿನಲ್ಲಿ ‘ಬಿ ದರ್ಜೆ’ ಸೌಲಭ್ಯ ಒದಗಿಸುವಂತೆ ಅವರು ಒತ್ತಾಯಿಸಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಖಾನ್ ಮೇಲೆ ಎರಡು ಬಾರಿ ಹತ್ಯೆ ಪ್ರಯತ್ನಗಳು ನಡೆದಿವೆ. ಕೃತ್ಯದಲ್ಲಿ ಭಾಗಿ ಆಗಿರುವವರನ್ನು ಇನ್ನೂ ಬಂಧಿಸಿಲ್ಲ. ಅವರಿಗೆ ವಿಷ ಹಾಕಬಹುದು ಎಂಬ ಭಯವಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮನೆ ಆಹಾರ ಸೇವಿಸಲು ಹಾಗೂ ಜೈಲು ನಿಯಮ ಪ್ರಕಾರ ಖಾಸಗಿ ವೈದ್ಯರಿಂದ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ಅವಕಾಶ ನೀಡಬೇಕು. ಖಾನ್ ಅವರಿಗೆ ಉತ್ತಮ ಸೌಲಭ್ಯ ಏಕೆ ನಿರಾಕರಿಸಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕೆಲ ದಿನಗಳ ಹಿಂದೆ ಬುಶ್ರಾ ಅವರು ಇಮ್ರಾನ್ ಅವರನ್ನು ಕಾರಾಗೃಹದಲ್ಲಿ ಅರ್ಧ ತಾಸು ಭೇಟಿಯಾಗಿದ್ದರು.
ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್‌ಗೆ ವಿಚಾರಣಾ ನ್ಯಾಯಾಲಯ ಮೂರು ವರ್ಷ ಜೈಲು
ಶಿಕ್ಷೆ ವಿಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.