ಇಸ್ಲಾಮಾಬಾದ್: ‘ತೆಹ್ರೀಕ್–ಐ–ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಸಂಘಟನೆಯು ದೇಶದಲ್ಲಿ ಭಯೋತ್ಪಾದನಾ ಕೃತ್ಯ ನಡೆಸುವ ಸಾಧ್ಯತೆ ಇರುವುದರಿಂದ ಪಾಕಿಸ್ತಾನ ಸರ್ಕಾರವು ದೇಶದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ’ ಎಂದು ಮಾಧ್ಯಮವೊಂದು ಗುರುವಾರ ವರದಿ ಮಾಡಿದೆ.
ಟಿಟಿಪಿ ಕಮಾಂಡರ್‌ಗಳಾದ ಓಮರ್ ಖಾಲಿದ್ ಖೊರಾಸನಿ ಮತ್ತು ಅಫ್ತಾಬ್ ಪಾರ್ಕೆ ಅವರ ಹತ್ಯೆ ನಂತರ ಟಿಟಿಪಿ ಹೈಕಮಾಂಡ್ ಅಫ್ಗಾನಿಸ್ತಾನದ ಪಕ್ತಿಕಾದಲ್ಲಿ ಪಾಕಿಸ್ತಾನ ಸರ್ಕಾರದೊಂದಿಗೆ ಶಾಂತಿ ಮಾತುಕತೆ ಸಭೆ ನಡೆಸಿತ್ತು. ಇದು ಫಲಪ್ರದವಾಗಿರಲಿಲ್ಲ.
ಇದರ ಬೆನ್ನಲ್ಲೇ ನಾಲ್ಕು ಪ್ರಾಂತ್ಯಗಳ ಆಡಳಿತಕ್ಕೆ ಪತ್ರ ಬರೆದಿರುವ ಪಾಕಿಸ್ತಾನ ಸರ್ಕಾರವು ಬಿಗಿ ಭದ್ರತೆ ಕೈಗೊಳ್ಳುವುದರ ಜೊತೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಎಲ್ಲಾ ಸ್ಥಳಗಳ ಮೇಲೆ ಕಣ್ಗಾವಲು ಇಡುವಂತೆ ಸೂಚಿಸಿದೆ.
‘ಪಾಕಿಸ್ತಾನ ಸರ್ಕಾರವು ಟಿಟಿಪಿಯ ಮುಖ್ಯ ಬೇಡಿಕೆಯೊಂದನ್ನು ತಿರಸ್ಕರಿಸಿತ್ತು. ಇದು ಟಿಟಿಪಿ ಮುಖಂಡರ ಕೋಪಕ್ಕೆ ಕಾರಣವಾಗಿದ್ದು ಆ ಸಂಘಟನೆಯು ದೇಶದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ. ಹೀಗಾಗಿ ಕಟ್ಟೆಚ್ಚರ ವಹಿಸುವಂತೆ ಪಾಕಿಸ್ತಾನದ ಆಂತರಿಕ ಸಚಿವಾಲಯವು ಎಲ್ಲಾ ಪ್ರಾಂತ್ಯಗಳ ಗೃಹ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಹೋದ ತಿಂಗಳು ಪತ್ರ ಬರೆದಿದೆ’ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.