ಲಾಹೋರ್: ‘ಭಾರತವು ತನ್ನ ಉದ್ಯಮಿಗಳನ್ನು ಉತ್ತಮ ರೀತಿಯಲ್ಲಿ ಬೆಂಬಲಿಸುತ್ತಿರುವುದರಿಂದ ದೇಶದ ಪ್ರಗತಿ ಸಾಧ್ಯವಾಗಿದೆ. ಆದರೆ ನಗದು ಕೊರತೆ ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಉದ್ಯಮಿಗಳನ್ನು ಕಳ್ಳರಂತೆ ಕಾಣಲಾಗುತ್ತಿದೆ’ ಎಂದು ಪಾಕಿಸ್ತಾನದ ಆಂತರಿಕ ಸಚಿವ ಮೊಹಸೀನ್ ನಖ್ವಿ ಬೇಸರ ವ್ಯಕ್ತಪಡಿಸಿದ್ದಾರೆ.
‘ಭಾರತದಲ್ಲಿ ಉದ್ಯಮಿಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಹಾಗೂ ಗೌರವದಿಂದ ಕಾಣಲಾಗುತ್ತದೆ. ಆದರೆ ಪಾಕಿಸ್ತಾನದ ಸ್ಥಿತಿಯೇ ಭಿನ್ನ. ಇಲ್ಲಿ ಉದ್ಯಮಿಯೊಬ್ಬ ಬೆಳೆಯುತ್ತಿದ್ದಾನೆ ಎಂದರೆ ಆತನಿಗೆ ಕಳ್ಳನ ಪಟ್ಟ ಕಟ್ಟಲಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
2022ರಲ್ಲಿ 17 ಸಾವಿರ ಪಾಕಿಸ್ತಾನಿ ಪ್ರಜೆಗಳಿಗೆ ಸೇರಿದ 23 ಸಾವಿರ ಆಸ್ತಿಗಳ ಮಾಹಿತಿ ಸೋರಿಕೆಯಾದ ‘ದುಬೈ ಲೀಕ್ಸ್’ ಪ್ರಕರಣ ಕುರಿತು ನಖ್ವಿ ಮಾತನಾಡಿದ್ದಾರೆ.
ಸಂಘಟಿತ ಅಪರಾಧ ಹಾಗೂ ಭ್ರಷ್ಟಾಚಾರ ಯೋಜನೆ ಕುರಿತು ಸಂಗ್ರಹಿಸಿದ ಮಾಹಿತಿ ಅನ್ವಯ, ನಖ್ವಿ ಅವರ ಪತ್ನಿಗೆ ಸೇರಿದ ದುಬಾರಿ ಬೆಲೆಯ ಆಸ್ತಿ ದುಬೈನಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದೇ ವರದಿಯಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರ ಮಕ್ಕಳಾದ ಬಿಲಾವಲ್ ಭುಟ್ಟೊ ಜರ್ದಾರಿ, ಆಸೀಫಾ ಭುಟ್ಟೊ ಜರ್ದಾರಿ, ಮೂರು ಬಾರಿ ಪ್ರಧಾನಿಯಾದ ನವಾಜ್ ಶರೀಫ್ ಅವರ ಪುತ್ರ ಹುಸೈನ್ ನವಾಜ್, ಪಾಕಿಸ್ತಾನ ಸೇನೆಯ ಮಾಜಿ ಮುಖ್ಯಸ್ಥ ಖಮಾರ್ ಜಾವೇದ್ ಬಾಜ್ವಾ ಅವರ ಪುತ್ರ ಸಾದ್ ಸಿದ್ಧಿಖಿ ಬಾಜ್ವಾ, ಸೆನೆಟರ್ ಫೈಜಲ್ ವಾವ್ಡಾ, ಸಿಂಧ್ ಮಾಹಿತಿ ಸಚಿವ ಶಾರ್ಜೀಲ್ ಮೆಮನ್ ಹಾಗೂ ಡಜನ್‌ಗಟ್ಟಲೆ ನಿವೃತ್ತ ಸೇನಾಧಿಕಾರಿಗಳ ಹೆಸರು ಇವೆ ಎಂದು ವರದಿಯಾಗಿದೆ.
‘ಒಬ್ಬ ಉದ್ಯಮಿಯಾಗಿ ನನ್ನ ಹಣವನ್ನು ನನಗೆ ಇಷ್ಟಬಂದಲ್ಲಿ ನಾನು ಹೂಡಿಕೆ ಮಾಡುತ್ತೇನೆ. ನನ್ನ ಪತ್ನಿ ಲಂಡನ್‌ನಲ್ಲೂ ಆಸ್ತಿ ಹೊಂದಿದ್ದಾಳೆ. ವಿದೇಶದಲ್ಲಿರುವ ಆಸ್ತಿಗೂ ನನ್ನ ಪತ್ನಿ ತೆರಿಗೆ ಕಟ್ಟಿದ್ದಾಳೆ. ವಿದೇಶದಲ್ಲಿ ಆಸ್ತಿ ಮಾಡುವುದು ಯಾವುದೇ ಅಕ್ರಮವಲ್ಲ. ಹಲವು ಮಾಧ್ಯಮ ಸಂಸ್ಥೆಗಳೂ ದುಬೈನಲ್ಲಿ ಆಸ್ತಿ ಹೊಂದಿವೆ. ಆದರೆ ಅಕ್ರಮವಾಗಿ ವಿದೇಶದಲ್ಲಿ ಆಸ್ತಿ ಹೊಂದಿದವರ ವಿರುದ್ಧ ತನಿಖಾ ಸಂಸ್ಥೆ ಮಾಹಿತಿ ಕಲೆಹಾಕಿ, ಕ್ರಮ ಕೈಗೊಳ್ಳಬೇಕು’ ಎಂದು ನಖ್ವಿ ಹೇಳಿದ್ದಾರೆ.
ದುಬೈ ಲೀಕ್ಸ್‌ನಲ್ಲಿ ನಖ್ವಿ ಹಾಗೂ ಇತರರ ಹೆಸರು ಇದ್ದು, ಸಾಮಾಜಿಕ ಜಾಲತಾಣದಲ್ಲಿ ಇವರ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ನಮ್ಮ ದೇಶದವರೇ ಹೊರಗೆ ಹೋಗಿ ಆಸ್ತಿ ಮಾಡುತ್ತಿರುವಾಗ, ವಿದೇಶಿ ಕಂಪನಿಗಳು ಹೇಗೆ ಪಾಕಿಸ್ತಾನದಲ್ಲಿ ಹೂಡಿಕೆಗೆ ಮುಂದಾಗಲು ಸಾಧ್ಯ ಎಂಬ ಟೀಕೆಗಳು ಕೇಳಿಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.