ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಭೀಕರ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಹಿರಿಯ ಮಂತ್ರಿಯೊಬ್ಬರು ಗುರುವಾರ ಸಂಸತ್‌ನಲ್ಲೇ ಒಪ್ಪಿಕೊಂಡಿದ್ದಾರೆ. 2019ರ ಫೆ.14ರಂದು ಸಂಭವಿಸಿದ್ದ ಈ ಭಯೋತ್ಪಾದಕ ದಾಳಿಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧಭೀತಿ ಎದುರಾಗಿತ್ತು.
'ಭಾರತಕ್ಕೆ ನಾವು ಅದರ ಮನೆಯಲ್ಲೇ ಹೊಡೆದೆವು. ಪುಲ್ವಾಮಾದಲ್ಲಿನ ನಮ್ಮ ಯಶಸ್ಸು, ಇಮ್ರಾನ್ ಖಾನ್ ನೇತೃತ್ವದಲ್ಲಿ ಈ ರಾಷ್ಟ್ರ ಸಾಧಿಸಿದ ಯಶಸ್ಸಾಗಿದೆ. ನೀವು ಮತ್ತು ನಾವೆಲ್ಲರೂ ಆ ಯಶಸ್ಸಿನ ಭಾಗವಾಗಿದ್ದೇವೆ' ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಸಂಸತ್‌ನ ಚರ್ಚೆಯೊಂದರ ಸಂದರ್ಭದಲ್ಲಿ ಹೇಳಿದರು.
ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡದಿದ್ದರೆ ಭಾರತವು 'ರಾತ್ರಿ 9 ಗಂಟೆಗೆ ದಾಳಿ ಮಾಡಬಹುದು' ಎಂದು ಪ್ರಮುಖ ಸಭೆಯಲ್ಲಿ ವಿದೇಶಾಂಗ ಸಚಿವ ಷಾಹ್ ಮಹಮೂದ್ ಖುರೇಷಿ ಹೇಳಿದ್ದರು. ಆಗ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಕಾಲುಗಳು ನಡುಗುತ್ತಿದ್ದವು ಎಂದು ಪಿಎಂಎಲ್–ಎನ್ ಮುಖಂಡ ಅಯಾಝ್ ಸಾದಿಖ್ ಪಾಕಿಸ್ತಾನ ಸಂಸತ್ತಿನಲ್ಲಿ ಹೇಳಿದ್ದರು. ಇದಾದ ಮರುದಿನವೇ ಫವಾದ್ ಚೌಧರಿ ಈ ಮಹತ್ವದ ಹೇಳಿಕೆ ನೀಡಿದ್ದಾರೆ.
ಸಾದಿಖ್ ಅವರ ಹೇಳಿಕೆ ಸರಿಯಲ್ಲ ಎಂದೂ ಫವಾದ್ ಚೌಧರಿ ಹೇಳಿದ್ದಾರೆ. ಚೌದರಿ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಅಪ್ತರಲ್ಲಿ ಒಬ್ಬರು.
ವಾದ ಬದಲಿಸಿದ ಸಚಿವ: ಫವಾದ್ ಹೇಳಿಕೆಯಿಂದಾಗಿ ಸಂಸತ್‌ನಲ್ಲಿ ಕೋಲಾಹಲ ಸೃಷ್ಟಿಯಾಯಿತು. ನಂತರ ಅವರು ತಮ್ಮ ವಾದ ಬದಲಿಸಿ, 'ಪುಲ್ವಾಮ ನಂತರದ ಘಟನೆಗಳ ಬಳಿಕ ಪಾಕಿಸ್ತಾನ ವಾಯು ದಾಳಿಯ ಮೂಲಕ ಭಾರತವನ್ನು ಅದರ ಮನೆಯಲ್ಲಿ ಹೊಡೆದಿದೆ,' ಎಂದು ಹೇಳಿದ್ದಾರೆ. ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.