ADVERTISEMENT

ಉಗ್ರ ನಿಗ್ರಹಕ್ಕೆ ಕ್ರಮ ಕೈಗೊಳ್ಳಿ: ಪಾಕಿಸ್ತಾನಕ್ಕೆ ಭಾರತದ ಎಚ್ಚರಿಕೆ 

ಭಯೋತ್ಪಾದನೆ ನಿರ್ಮೂಲನೆಗೆ ಎಫ್‌ಎಟಿಎಫ್‌ನ ಕ್ರಿಯಾ ಯೋಜನೆ ಜಾರಿಗೆ ತರಲೂ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 9:37 IST
Last Updated 22 ಜೂನ್ 2019, 9:37 IST
   

ನವದೆಹಲಿ: ‘ಪಾಕಿಸ್ತಾನವು ತನ್ನ ನೆಲದಲ್ಲಿ ಸಕ್ರೀಯವಾಗಿರುವ ಉಗ್ರ ಸಂಘಟನೆಗಳ ಹಣಕಾಸನ್ನು ನಿಯಂತ್ರಿಸಬೇಕು. ಆದರ ಮೂಲಕ ಭಯೋತ್ಪಾದನೆಯ ಮೂಲೋತ್ಪಾಟನೆ ಮಾಡಲು ಜವಾಬ್ದಾರಿಯುತ, ಪರಿಶೀಲನಾತ್ಮಕ, ದೃಢ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ, ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಆರ್ಥಿಕ ಕ್ರಿಯಾಪಡೆ (ಎಫ್‌ಎಟಿಎಫ್‌) ನೀಡಿರುವ ಕ್ರಿಯಾ ಯೋಜನೆಗಳನ್ನು ಪಾಕಿಸ್ತಾನವು ಸೆಪ್ಟಂಬರ್‌ ಒಳಗಾಗಿ ಸಮರ್ಥವಾಗಿ ಜಾರಿಗೊಳಿಸಬೇಕು,’ ಎಂದು ಭಾರತವು ಶನಿವಾರ ಪಾಕಿಸ್ತಾನಕ್ಕೆ ಸಲಹೆ ನೀಡಿದೆ.

ಲಷ್ಕರ್‌ ಎ ತೋಯ್ಬಾ, ಜೈಶ್‌ ಎ ಮೊಹಮ್ಮದ್‌ ಸೇರಿದಂತೆ ಪ್ರಮುಖ ಉಗ್ರ ಸಂಘಟನೆಗಳಿಗೆ ಲಭ್ಯವಾಗುತ್ತಿರುವ ಆರ್ಥಿಕ ನೆರವನ್ನು ತಡೆಯುವಲ್ಲಿ ಪಾಕಿಸ್ತಾನವು ವಿಫಲವಾಗಿರುವ ಹಿನ್ನೆಲೆಯಲ್ಲಿ ಎಫ್‌ಎಟಿಎಫ್‌ ( ಫೈನಾನ್ಶಿಯಲ್‌ ಆಕ್ಷನ್‌ ಟಾಸ್ಕ್‌ ಫೋರ್ಸ್‌–ಆರ್ಥಿಕ ಕ್ರಿಯಾಪಡೆ) ಪಾಕಿಸ್ತಾನವನ್ನು ಕಪ್ಪು ಪಟ್ಟಿ ನಂತರದ ‘ಬೂದು‘ ಪಟ್ಟಿಯಲ್ಲಿ ಉಳಿಸಲು ನಿರ್ಧಾರ ಕೈಗೊಂಡಿದೆ. ಅಲ್ಲದೆ, ಉಗ್ರರ ಹಣಕಾಸಿಗೆ ಕಡಿವಾಣ ಹಾಕಲು, ಭಯೋತ್ಪಾದನೆ ದಮನ ಮಾಡಲು ತಾನು ಸೂಚಿಸಿರುವ 27 ಅಂಶಗಳ ಕ್ರಿಯಾ ಯೋಜನೆಯನ್ನು ಇದೇ ವರ್ಷದ ಸೆಪ್ಟೆಂಬರ್‌ನ ಒಳಗಾಗಿ ಜಾರಿಗೆ ತರಬೇಕು ಎಂದು ಗಡುವು ವಿಧಿಸಿದೆ.

ಇದೇ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಶನಿವಾರ ಸಂದೇಶ ರವಾನಿಸಿರುವ ಭಾರತ, ಉಗ್ರ ಸಂಘಟೆಗಳನ್ನು ಹತ್ತಿಕ್ಕಲು ಆರ್ಥಿಕ ಕ್ರಿಯಾಪಡೆಯ ಕ್ರಿಯಾ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಒತ್ತಾಯಿಸಿದೆ.

ADVERTISEMENT

ಈ ಕುರಿತು ಮಾತನಾಡಿರುವ ಭಾರತದ ವಿದೇಶಾಂಕ ಇಲಾಕೆಯ ವಕ್ತಾರ ರವೀಶ್‌ ಕುಮಾರ್‌ ’ಉಗ್ರ ನಿಗ್ರಹಕ್ಕಾಗಿ ಆರ್ಥಿಕ ಕ್ರಿಯಾಪಡೆ ನೀಡಿದ್ದ ಕ್ರಿಯಾ ಯೋಜನೆಯನ್ನು 2019ರ ಜನವರಿಯ ಅಂತ್ಯದ ವೇಳೆಗೆ ಜಾರಿಗೊಳಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ. ಇದೇ ಹಿನ್ನೆಲೆಯಲ್ಲಿ ಹಣಕಾಸು ಕ್ರಿಯಾಪಡೆಯು ಪಾಕಿಸ್ತಾನವನ್ನು ಬೂದು ಬಣ್ಣ ಪಟ್ಟಿಯಲ್ಲಿಯೇ ಉಳಿಸಿಕೊಂಡಿದೆ. ಅದರ ಕ್ರಿಯಾ ಯೋಜನೆಗಳನ್ನು ಇನ್ನುಳಿದ ಸಮಯದಲ್ಲಾದರೂ ಪಾಕಿಸ್ತಾನ ರಾಜಕೀಯ ಇಚ್ಛಾಶಕ್ತಿಯೊಂದಿಗೆ ಜಾರಿಗೆ ತರಬೇಕು. ಈ ಮೂಲಕ ಭಯೋತ್ಪಾದನೆಯ ನಿರ್ಮೂಲನೆಯಲ್ಲಿ ಜವಾಬ್ದಾರಿಯುತ, ಪರಿಶೀಲನಾತ್ಮಕ, ದೃಢ ಹೆಜ್ಜೆಗಳನ್ನು ಇರಿಸಬೇಕು,‘ ಎಂದು ಒತ್ತಾಯಿಸಿದರು.

ಪ್ಯಾರಿಸ್‌ ಮೂಲದ ಎಫ್‌ಎಟಿಎಫ್‌– ಹಣಕಾಸು ಕ್ರಿಯಾಪಡೆಯು ಉಗ್ರಗಾಮಿಗಳ ಹಣಕಾಸು ವ್ಯವಸ್ಥೆಯನ್ನು ನಿಗ್ರಹಿಸುವ, ಅಕ್ರಮ ಹಣ ವರ್ಗಾವಣೆಯನ್ನು ತಡೆಯುವ ಕಾರ್ಯ ನಿರ್ವಹಿಸುತ್ತದೆ. ತನ್ನ ನೆಲದಲ್ಲಿ ಸಕ್ರೀಯವಾಗಿರುವ ನಿಷೇಧಕ್ಕೊಳಗಾಗಿರುವ ಉಗ್ರ ಸಂಘಟನೆಗಳ ಕಾರ್ಯಚಟುವಟಿಕೆಗಳನ್ನು ಮರುಪರಿಶೀಲನೆ ಮಾಡುವಂತೆ ಅದು ಪಾಕಿಸ್ತಾನಕ್ಕೆ ತಿಳಿಸಿತ್ತು. ಅಲ್ಲದೆ, ಉಗ್ರ ನಿಗ್ರಹಕ್ಕಾಗಿ ತಾನು ಸೂಚಿಸಿರುವ ಕ್ರಿಯಾ ಯೋಜನೆಯನ್ನು ಜಾರಿಗೆ ತರಲು ಹಲವು ಗಡುವುಗಳನ್ನು ವಿಧಿಸಿತ್ತು. ಇದರ ಜತೆಗೆ ಉಗ್ರ ಸಂಘಟನೆಗಳ ಆರ್ಥಿಕತೆಯನ್ನು ನಿಯಂತ್ರಿಸದ, ಅಕ್ರಮ ಹಣ ವರ್ಗಾವಣೆ ತಡೆಯದ, ದುರ್ಬಲ ಆರ್ಥಿಕ ನೀತಿ ಅನುಸರಿಸುತ್ತಿದ್ದ ಪಾಕಿಸ್ತಾನವನ್ನು ಅದು ಬೂದು ಪಟ್ಟಿಗೆ ಸೇರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.