ಇಸ್ಲಾಮಾಬಾದ್: ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವುದಾಗಿ ಪ್ರಕಟಿಸಿದ್ದ ಪ್ರಧಾನಿ ಇಮ್ರಾನ್ ಖಾನ್ ಅವರು ಭಾಷಣವನ್ನು ರದ್ದು ಪಡಿಸಿರುವುದಾಗಿ ವರದಿಯಾಗಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೆದ್ ಬಾಜ್ವಾ ಮತ್ತು ಗುಪ್ತಚರ ಇಲಾಖೆ ಐಎಸ್‌ಐನ ಡಿಜಿ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಮ್ ಅವರು ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವು ಬಹುಮತ ಕಳೆದುಕೊಂಡಿದ್ದು, ಇಮ್ರಾನ್ ಅವರು ಸ್ಥಾನದಿಂದ ಕೆಳಗಿಳಿಯುವ ಬಗ್ಗೆ ಚರ್ಚೆಗಳು ಶುರುವಾಗಿದೆ. ಈ ಮಧ್ಯೆ ಸೇನೆ ಮತ್ತು ಗುಪ್ತಚರ ಇಲಾಖೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆದಿದ್ದು, ಇಮ್ರಾನ್ ಅವರು ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆ ಕರೆದಿದ್ದಾರೆ.
ಇಮ್ರಾನ್ ವಿರುದ್ಧ ಅವಿಶ್ವಾಸ ನಿರ್ಣಯದ ಸಂಬಂಧ ಏಪ್ರಿಲ್ 3ರಂದು ಸಂಸತ್ತಿನಲ್ಲಿ ಮತ ಹಾಕುವ ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನವೇ ಇಮ್ರಾನ್ ಖಾನ್ ರಾಜೀನಾಮೆ ನೀಡುವಂತೆ ಪಿಎಂಎಲ್–ಎನ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಒತ್ತಾಯಿಸಿವೆ.
ಇಮ್ರಾನ್ ಅವರ ಸರ್ಕಾರ ರಚನೆಯಲ್ಲಿ ಸಾಥ್ ನೀಡಿದ್ದ ಎಂಕ್ಯುಎಂ ಪಕ್ಷವು ಬುಧವಾರ ಮೈತ್ರಿ ಮುರಿದುಕೊಂಡಿದೆ. ವಿರೋಧ ಪಕ್ಷ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಜೊತೆಗೆ ಕೈಜೋಡಿಸುವುದಾಗಿ ಎಂಕ್ಯುಎಂ ಘೋಷಿಸಿದ್ದು, ಪಕ್ಷದ ಇಬ್ಬರು ಮುಖಂಡರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಎಂಕ್ಯುಎಂ ಬೆಂಬಲ ಕಳೆದುಕೊಳ್ಳುವ ಮೂಲಕ ಇಮ್ರಾನ್ ಖಾನ್ ಸರ್ಕಾರವು ಸಂಸತ್ತಿನಲ್ಲಿ 164 ಸ್ಥಾನಗಳನ್ನಷ್ಟೇ ಉಳಿಸಿಕೊಂಡಿದೆ. ಅವಿಶ್ವಾಸ ನಿರ್ಣಯದಿಂದ ಉಳಿಯಲು ಇಮ್ರಾನ್ ಅವರಿಗೆ ಕನಿಷ್ಠ 172 ಸದಸ್ಯರ ಬೆಂಬಲ ಅವಶ್ಯವಾಗಿದೆ. ಪ್ರಸ್ತುತ ಪಾಕಿಸ್ತಾನ್ ತೆಹ್ರೀಕ್–ಇ ಇನ್ಸಾಫ್ (ಪಿಟಿಐ) ಪಕ್ಷದಲ್ಲಿ 155 ಸದಸ್ಯರು, ಎಂಎನ್ಎ ಮತ್ತು ಪಿಎಂಎಲ್(ಕ್ಯು)ನ ನಾಲ್ವರು, ಜಿಡಿಎ ಪಕ್ಷದ ಮೂವರು ಹಾಗೂ ಬಿಎಪಿ ಮತ್ತು ಎಎಂಎಲ್‌ನ ತಲಾ ಒಬ್ಬರು ಸದಸ್ಯರ ಬೆಂಬಲ ಇಮ್ರಾನ್ ಅವರಿಗೆ ಉಳಿದಿದೆ.
ಈಗ ವಿರೋಧ ಪಕ್ಷಗಳಿಗೆ ಒಟ್ಟು 175 ಸದಸ್ಯರ ಬಲವಿದೆ. ಬಲೋಚಿಸ್ತಾನ್ ಅವಾಮಿ ಪಾರ್ಟಿ (ಬಿಎಪಿ) ಸಹ ಪಿಟಿಐ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆಯುತ್ತಿರುವುದಾಗಿ ಸಂಸತ್ತಿನ ಸ್ಪೀಕರ್‌ಗೆ ಪತ್ರ ಬರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.