ADVERTISEMENT

ಇಮ್ರಾನ್‌ ಖಾನ್‌ ಪಕ್ಷದ ಕಚೇರಿಯಲ್ಲಿ ಶೋಧ

ಪಿಟಿಐ
Published 1 ಫೆಬ್ರುವರಿ 2024, 13:37 IST
Last Updated 1 ಫೆಬ್ರುವರಿ 2024, 13:37 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ತೆಹ್ರೀಕ್‌–ಎ–ಇನ್ಸಾಫ್‌ (ಪಿಟಿಐ) ಪಕ್ಷದ ಆಡಳಿತ ಕಚೇರಿಯಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಶೋಧ ಕೈಗೊಂಡಿದ್ದಾರೆ ಎಂದು ‘ದಿ ಡಾನ್’ ದಿನಪತ್ರಿಕೆ ಗುರುವಾರ ವರದಿ ಮಾಡಿದೆ.

‘ಮಫ್ತಿಯಲ್ಲಿದ್ದ ಪೊಲೀಸರು ಕಚೇರಿಯೊಳಗೆ ಪ್ರವೇಶಿಸಿ, ಇಡೀ ಆವರಣವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಪಕ್ಷದ ಸದಸ್ಯರು ಕಚೇರಿ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಿದ್ದಾರೆ’ ಎಂದು ವರದಿ ತಿಳಿಸಿದೆ.

ತೋಷಖಾನ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್‌ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಪಾಕಿಸ್ತಾನದ ನ್ಯಾಯಾಲಯವೊಂದು ಬುಧವಾರ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ADVERTISEMENT

ಇಸ್ಲಾಮಾಬಾದ್‌ನ ಸೆಕ್ಟರ್‌ ಜಿ–8ನಲ್ಲಿ ಬುಧವಾರ ಪಿಟಿಐ ಪಕ್ಷದ ಸಭೆ ಆಯೋಜಿಸಲಾಗಿತ್ತು. ಅದಕ್ಕೂ ಮುನ್ನ ಪೊಲೀಸರು ಕಚೇರಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಆದರೂ ಪಿಟಿಐ ಪಕ್ಷವು ವರ್ಚುವಲ್‌ ಆಗಿ ಸಭೆಯನ್ನು ನಡೆಸಿದೆ ಎಂದು ಮೂಲಗಳು ಹೇಳಿವೆ.

ಶೋಧ ಕೈಗೊಂಡಿಲ್ಲ: ಪಿಟಿಐ ಕಚೇರಿಯಲ್ಲಿ ಶೋಧ ನಡೆಸಲಾಗಿದೆ ಎಂಬ ವರದಿಯನ್ನು ಇಸ್ಲಾಮಾಬಾದ್ ಪೊಲೀಸರು ಅಲ್ಲಗಳೆದಿದ್ದಾರೆ.

‘ಮ್ಯಾಜಿಸ್ಟ್ರೇಟ್‌ ಅವರ ಅನುಮತಿ ಇಲ್ಲದೆ ಶೋಧ ಕೈಗೊಳ್ಳಲು ಸಾಧ್ಯವಿಲ್ಲ. ಪಿಟಿಐ ಕಚೇರಿಯಲ್ಲಿ ಶೋಧ ನಡೆಸುವಂತೆ ನಮಗೆ ಯಾವುದೇ ಆದೇಶ ಬಂದಿಲ್ಲ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್‌ ಮತ್ತು ಅವರ ಪತ್ನಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ತೀರ್ಪನ್ನು ವಿರೋಧಿಸಿ ಪಿಟಿಐ ಪಕ್ಷದಿಂದ ಪ್ರತಿಭಟನೆ ನಡೆಯುವ ಸಾಧ್ಯತೆಯಿತ್ತು. ಕಚೇರಿಗೆ ಭದ್ರತೆ ಒದಗಿಸಲು ಪೊಲೀಸರು ಅಲ್ಲಿಗೆ ತೆರಳಿದ್ದಾರೆ. ಕಚೇರಿಯ ಒಳಗೆ ಪ್ರವೇಶಿಸಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.