ಇಸ್ಲಾಮಾಬಾದ್ (ಪಿಟಿಐ): ತೋಶಾಖಾನಾ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯನ್ನು ಪ್ರಶ್ನಿಸಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಉಡುಗೊರೆಗಳ ವಿವರಗಳನ್ನು ತಮ್ಮ ಬಳಿಯೇ ಇಟ್ಟುಕೊಟ್ಟಿಕೊಂಡಿರುವ ಮತ್ತು ವಿದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಡುಗೊರೆಯಾಗಿ ಬಂದ ವಸ್ತುಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿದ್ದ ಆರೋಪವೂ ಅವರ ಮೇಲಿದೆ.
ಇಮ್ರಾನ್ ಅವರ ಅರ್ಜಿಯನ್ನು ವಜಾಗೊಳಿಸುವ ವೇಳೆ, ಪ್ರಕರಣವನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ (ಐಎಚ್‌ಸಿ) ನಡೆಯುತ್ತಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಮನಗಂಡಿದೆ. ವಿಚಾರಣಾ ನ್ಯಾಯಾಲಯ ಮತ್ತು ಇಸ್ಲಾಮಾಬಾದ್ ಹೈಕೋರ್ಟ್ ಕಾನೂನಿನ ಪ್ರಕಾರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂಬ ಭರವಸೆಯನ್ನು ನ್ಯಾಯಮೂರ್ತಿಗಳಾದ ಯಾಹ್ಯಾ ಆಫ್ರಿದಿ, ಮುಸರತ್ ಹಿಲಾಲಿ ಮತ್ತು ಮಜಹರ್ ಅಲಿ ಅಕ್ಬರ್ ನಖ್ವಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವ್ಯಕ್ತಪಡಿಸಿದೆ.
‘ಈಗ ನೀಡಿರುವ ತೀರ್ಪಿನಿಂದಾಗಿ ಇಮ್ರಾನ್ ಅವರು ಇತರ ಯಾವುದೇ ಪ್ರಕರಣಗಳಲ್ಲಿ ಸಲ್ಲಿಸಿರುವ ಅರ್ಜಿಗಳ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದೂ ಪೀಠ ಹೇಳಿದೆ.
ಇಸ್ಲಾಮಾಬಾದ್‌ನ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ತೋಶಾಖಾನಾ ಪ್ರಕರಣದ ವಿಚಾರಣೆಗೆ ತಡೆ ನೀಡಬೇಕೆಂದೂ ಇಮ್ರಾನ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಮ್ರಾನ್ ಅವರ ಈ ಅರ್ಜಿಯನ್ನೂ ಕೋರ್ಟ್ ಬುಧವಾರ ತಿರಸ್ಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.