ADVERTISEMENT

'ಪಾಕಿಸ್ತಾನ ಉಗ್ರರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದೆ'– ಅಮೆರಿಕ

ಅಮೆರಿಕ ಪ್ರವಾಸದಲ್ಲಿ ವಿಜಯ್‌ ಗೋಖಲೆ

ಏಜೆನ್ಸೀಸ್
Published 12 ಮಾರ್ಚ್ 2019, 6:07 IST
Last Updated 12 ಮಾರ್ಚ್ 2019, 6:07 IST
ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿ ಮೇಲೆ ಆತ್ಮಾಹುತಿ ದಾಳಿ ನಡೆದ ಸ್ಥಳ
ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿ ಮೇಲೆ ಆತ್ಮಾಹುತಿ ದಾಳಿ ನಡೆದ ಸ್ಥಳ    

ವಾಷಿಂಗ್ಟನ್‌: ಎಲ್ಲ ಉಗ್ರರ ವಿರುದ್ಧ ಕಠಿಣವಾಗಿ ನಡೆದುಕೊಳ್ಳಲಾಗುತ್ತದೆ ಹಾಗೂ ಭಾರತದೊಂದಿಗಿನ ಆತಂಕದ ವಾತಾವರಣ ಶಮಗೊಳಿಸಲು ಸೂಕ್ತ ಕ್ರಮವಹಿಸಲಾಗುತ್ತದೆ ಎಂದು ಪಾಕಿಸ್ತಾನ ಅಮೆರಿಕಾಗೆ ಭರವಸೆ ನೀಡಿರುವುದಾಗಿ ಶ್ವೇತ ಭವನದ ಉನ್ನತ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್‌ ಮೆಹಮೂದ್‌ ಖುರೇಷಿ ಅವರು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್‌ ಜತೆಗಿನ ಮಾತುಕತೆಯಲ್ಲಿ ಈ ಭರವಸೆ ನೀಡಿದ್ದಾರೆ. ಈ ಕುರಿತು ಬೋಲ್ಟನ್‌ ಟ್ವೀಟ್‌ ಮಾಡಿದ್ದಾರೆ

’ಪಾಕಿಸ್ತಾನದ ವಿದೇಶಾಂಗ ಸಚಿವ ಖುರೇಶಿ ಅವರೊಂದಿಗೆ ಮಾತನಾಡಿದ್ದು, ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ ಜೈಷ್ ಎ ಮೊಹಮ್ಮದ್‌ ಹಾಗೂ ಇತರೆ ಉಗ್ರ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪ್ರಸ್ತಾಪಿಸಿದ್ದೇನೆ. ಎಲ್ಲ ಉಗ್ರರ ವಿರುದ್ಧ ದೃಢವಾದ ಕ್ರಮ ತೆಗೆದುಕೊಳ್ಳುವುದಾಗಿ ವಿದೇಶಾಂಗ ಸಚಿವ ಭರವಸೆ ನೀಡಿದ್ದಾರೆ. ಭಾರತದೊಂದಿಗಿನ ಆತಂಕದ ವಾತಾವರಣ ಶಮಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಲಿದೆ’ ಎಂದಿರುವುದಾಗಿ ಬೋಲ್ಟನ್‌ ಹೇಳಿದ್ದಾರೆ.

ADVERTISEMENT

ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಅಮೆರಿಕ ಭೇಟಿಯಲ್ಲಿರುವ ಸಂದರ್ಭದಲ್ಲಿಯೇ ಬೋಲ್ಟನ್‌ ಖುರೇಷಿ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ವಿಜಯ್‌ ಗೋಖಲೆ ಅಮೆರಿಕ ಪ್ರವಾಸದ ಮೊದಲ ದಿನ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಭೇಟಿ ಮಾಡಿದ್ದಾರೆ.

ಪಾಕಿಸ್ತಾನದ ಮೇಲೆ ಅಮೆರಿಕ ಒತ್ತಡ ಹೇರುವುದನ್ನು ಮುಂದುವರಿಸಲಿದೆ ಎಂದು ಅಮೆರಿಕ ಪ್ರಕಟಣೆಯಲ್ಲಿ ಹೇಳಿದೆ.

ಪಾಕಿಸ್ತಾನ ನೆಲದಿಂದ ಕಾರ್ಯಾಚರಿಸುತ್ತಿರುವ ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದು ಹಾಗೂ ಪುಲ್ವಾಮಾ ದಾಳಿಗೆ ಕಾರಣರಾದವರನ್ನು ಹೊರತರುವ ಪ್ರಾಮುಖ್ಯತೆಯನ್ನು ವಿಜಯ್‌ ಗೋಖಲೆ ಮತ್ತು ಪಾಂಪಿಯೊ ಚರ್ಚಿಸಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯದ ಉಪ ವಕ್ತಾರ ರಾಬರ್ಟ್‌ ಪಲಾಡಿನೊ ಹೇಳಿದ್ದಾರೆ.

ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರ ಮತ್ತು ಜನರೊಂದಿಗೆ ಅಮೆರಿಕ ನಿಲ್ಲುತ್ತದೆ ಎಂದು ಪಾಂಪಿಯೊ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.