ಎಎಫ್‌ಪಿ
ಇಸ್ಲಾಮಾಬಾದ್: ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ 255 ಸ್ಥಾನಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಯಾವುದೇ ಪಕ್ಷಗಳಿಗೆ ಸ್ಪಷ್ಟ ಬಹುಮತ ಲಭ್ಯವಾಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಸೆರೆವಾಸದಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬೆಂಬಲಿಗರು ಮುನ್ನಡೆ ಸಾಧಿಸಿದ್ದಾರೆ. ಈ ಬೆನ್ನಲ್ಲೇ ಮೈತ್ರಿ ಸರ್ಕಾರ ರಚನೆ ಸಂಬಂಧ ‘ಕುದುರೆ ವ್ಯಾಪಾರ’ದ ಸಾಧ್ಯತೆಯೂ ದಟ್ಟವಾಗಿದೆ.
ಇಂತಹ ಅನಿಶ್ಚಿತತೆ ಎದುರಾದ ಬೆನ್ನಲ್ಲೇ, ‘ಸಂಯುಕ್ತ’ ಸರ್ಕಾರ ರಚನೆಗೆ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಸೈಯದ್ ಆಸಿಂ ಮುನೀರ್ ಶನಿವಾರ ಕರೆ ನೀಡಿದ್ದಾರೆ.
‘ಪಾಕಿಸ್ತಾನದ ಜನರು ಸಂವಿಧಾನದ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳಲು ರಾಜಕೀಯ ಪ್ರಬುದ್ಧತೆ ಮತ್ತು ಒಗ್ಗಟ್ಟು ತೋರಲು ಇದು ಸಕಾಲ. ಹೀಗಾಗಿ ಸ್ವ–ಹಿತಾಸಕ್ತಿ ಬಿಟ್ಟು ಯೋಚಿಸಿ’ ಎಂದು ಎಲ್ಲ ಪಕ್ಷಗಳ ರಾಜಕೀಯ ನಾಯಕರಿಗೆ ಸಲಹೆ ನೀಡಿದ್ದಾರೆ.
ಸೇನೆ ಬೆಂಬಲಿತ ನವಾಜ್ ಷರೀಫ್ ಅವರು ಒಕ್ಕೂಟ ಸರ್ಕಾರಕ್ಕೆ ಆಹ್ವಾನ ನೀಡಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
‘ಪಾಕಿಸ್ತಾನದ ಜನರು ಮುಕ್ತವಾಗಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಮತ್ತು ಕಾನೂನಿನ ರಕ್ಷಣೆಗೆ ಬಗ್ಗೆ ತಮಗಿರುವ ಬದ್ಧತೆಯನ್ನು ತೋರಿಸಿದ್ದಾರೆ. ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಳಗೊಂಡ ‘ಸಂಯುಕ್ತ ಸರ್ಕಾರ’ವು ದೇಶದ ವೈವಿಧ್ಯಮಯ ರಾಜಕಾರಣ ಮತ್ತು ಬಹುತ್ವವನ್ನು ಅತ್ಯುತ್ತಮವಾಗಿ ಪ್ರತಿನಿಧಿಸಲಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ದೇಶಕ್ಕೆ ಅವ್ಯವಸ್ಥಿತ, ಧ್ರುವೀಕೃತ ರಾಜಕಾರಣ ಮುಕ್ತ ವ್ಯವಸ್ಥೆ ಹಾಗೂ ಸ್ಥಿರ ಕೈಗಳ ಅಗತ್ಯವಿದೆ’ ಎಂದು ಹೇಳಿಕೆ ಮೂಲಕ ತಿಳಿಸಿದ್ದಾರೆ.
ಫಲಿತಾಂಶ:
ಚುನಾವಣಾ ಆಯೋಗ ನೀಡಿರುವ ಸದ್ಯದ ಮಾಹಿತಿ ಪ್ರಕಾರ, ಚುನಾವಣೆ ನಡೆದ 265 ಕ್ಷೇತ್ರಗಳ ಪೈಕಿ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು 101 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್–ನವಾಜ್ (ಪಿಎಂಎಲ್–ಎನ್) 73, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 51 ಸ್ಥಾನಗಳಲ್ಲಿ ಗೆದ್ದಿದೆ. ಇತರ ಪಕ್ಷಗಳು ಉಳಿದ ಸ್ಥಾನಗಳಲ್ಲಿ ಜಯ ಸಾಧಿಸಿವೆ.
ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್–ಎ–ಇನ್ಸಾಫ್ (ಪಿಟಿಐ) ಪಕ್ಷ ಹೊಂದಿದ್ದ ‘ಕ್ರಿಕೆಟ್ ಬ್ಯಾಟ್’ ಚಿಹ್ನೆಯನ್ನು ಚುನಾವಣಾ ಆಯೋಗವು ಹಿಂಪಡೆದಿದ್ದ ಕಾರಣ, ಪಿಟಿಐ ತನ್ನ ಅಭ್ಯರ್ಥಿಗಳನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿತ್ತು.
ಈ ಮಧ್ಯೆ, ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದಾಗಿ ಸೇನಾ ಬೆಂಬಲಿತ ಪಿಎಂಎಲ್–ಎನ್ ಹೇಳಿಕೊಂಡಿದೆ. ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಒಕ್ಕೂಟ ಸರ್ಕಾರ ರಚನೆಗಾಗಿ ಪಕ್ಷೇತರರು ಮತ್ತು ಪ್ರತಿಸ್ಪರ್ಧಿಗಳನ್ನು ಆಹ್ವಾನಿಸಿದ್ದಾರೆ. ಹಲವು ಪಕ್ಷಗಳ ನಾಯಕರು ಶುಕ್ರವಾರ ತಡರಾತ್ರಿ ಲಾಹೋರ್‌ನಲ್ಲಿರುವ ಪಿಎಂಎಲ್–ಎನ್ ಮುಖ್ಯ ಕಚೇರಿಗೆ ಮಾತುಕತೆಗೆ ತೆರಳಿದ್ದರು.
‘ಸರ್ಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲ ನಮ್ಮಲ್ಲಿ ಇಲ್ಲ. ನಮ್ಮೊಂದಿಗೆ ಕೈಜೋಡಿಸಲು ಇಚ್ಛಿಸುವ ಇತರೆ ಪಕ್ಷಗಳು ಮತ್ತು ಅಭ್ಯರ್ಥಿಗಳನ್ನು ಆಹ್ವಾನಿಸುತ್ತೇವೆ’ ಎಂದು ಷರೀಫ್ ಶನಿವಾರವೂ ತಿಳಿಸಿದ್ದಾರೆ.
ಖಾನ್ ಅವರ ಎಐ ವಿಡಿಯೊ ಬಿಡುಗಡೆ
ಇಸ್ಲಾಮಾಬಾದ್: ಸೆರೆವಾಸದಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಕೃತಕ ಬುದ್ಧಿಮತ್ತೆ ಬಳಸಿ ಸಿದ್ಧಪಡಿಸಿರುವ ಆಡಿಯೊ ಮತ್ತು ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದು, ‘ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.
‘ನವಾಜ್ ಷರೀಫ್ ಅವರು ಒಬ್ಬ ಅಪ್ರಬುದ್ಧ ವ್ಯಕ್ತಿ’ ಎಂದು ಟೀಕಿಸಿರುವುದೂ ಈ ಸಂದೇಶದಲ್ಲಿದೆ.
ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್–ಎ–ಇನ್ಸಾಫ್ ಪಕ್ಷದ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದೆ.
ಪಿಎಂಎಲ್–ಎನ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂಬುದಾಗಿ ಷರೀಫ್ ಅವರು ಹೇಳಿಕೆ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.