ADVERTISEMENT

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

ಪಿಟಿಐ
Published 11 ಜುಲೈ 2023, 9:45 IST
Last Updated 11 ಜುಲೈ 2023, 9:45 IST
ಇಮ್ರಾನ್ ಖಾನ್
ಇಮ್ರಾನ್ ಖಾನ್   

ಇಸ್ಲಾಮಾಬಾದ್‌: ಪಾಕಿಸ್ತಾನದ ಚುನಾವಣಾ ಆಯೋಗ ಮತ್ತು ಅದರ ಮುಖ್ಯಸ್ಥರನ್ನು ನಿಂದಿಸಿದ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಮಾಹಿತಿ ಮತ್ತು ಪ್ರಸಾರ ಖಾತೆಯ ಮಾಜಿ ಸಚಿವ ಫವಾದ್ ಚೌಧರಿ ವಿರುದ್ಧ ಆಯೋಗವು ಮಂಗಳವಾರ ಜಾಮೀನುರಹಿತ ಬಂಧನದ ವಾರಂಟ್‌ ಹೊರಡಿಸಿದೆ.

ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷವೇ ದೂರು ದಾಖಲಿಸಿದ್ದ ಆಯೋಗವು ಪಾಕಿಸ್ತಾನ ತೆಹ್ರೀಕ್‌–ಇ–ಇನ್ಸಾಫ್‌ (ಪಿಟಿಐ) ಮುಖ್ಯಸ್ಥ ಇಮ್ರಾನ್‌, ಪಕ್ಷದ ನಾಯಕರಾದ ಚೌಧರಿ ಹಾಗೂ ಅಸದ್ ಉಮರ್ ವಿರುದ್ಧ ಕಾನೂನು ಕ್ರಮದ ಪ್ರಕ್ರಿಯೆ ಆರಂಭಿಸಿತ್ತು.


ಖುದ್ದು ಹಾಜರಾಗಲು ಹಲವು ಬಾರಿ ಆಯೋಗದ ವಿಚಾರಣಾ ಸಮಿತಿಯು ಸೂಚಿಸಿತ್ತು. ಆದರೆ, ಇಮ್ರಾನ್‌ ಖಾನ್‌ ಮತ್ತು ಚೌಧರಿ ಗೈರುಹಾಜರಾಗಿದ್ದರು. ಹಾಗಾಗಿ, ನಿಸಾರ್ ದುರಾನಿ ನೇತೃತ್ವದ ನಾಲ್ವರು ಸದಸ್ಯರನ್ನು ಒಳಗೊಂಡ ಸಮಿತಿಯು ಈ ಇಬ್ಬರ ವಿರುದ್ಧ ವಾರಂಟ್‌ ಹೊರಡಿಸಿದೆ. 

ADVERTISEMENT


‘ಇತರೆ ಪ್ರಕರಣದಲ್ಲಿ ಕೋರ್ಟ್‌ಗೆ ಹಾಜರಾಗಬೇಕಿದೆ. ಜೊತೆಗೆ, ನನಗೆ ವೈದ್ಯಕೀಯ ನೆರವಿನ ಅಗತ್ಯವಿದೆ. ಹಾಗಾಗಿ, ಖುದ್ದು ಹಾಜರಿಗೆ ವಿನಾಯಿತಿ ನೀಡಬೇಕು’ ಎಂದು ಅಸದ್‌ ಉಮರ್‌ ಆಯೋಗಕ್ಕೆ ಕೋರಿದ್ದರು. 


ಈ ಸಂಬಂಧ ಅರ್ಜಿ ಸಲ್ಲಿಸಲು ಉಮರ್‌ಗೆ ಸೂಚಿಸಿದ ಆಯೋಗವು, ಇಮ್ರಾನ್‌ ಮತ್ತು ಚೌಧರಿ ವಿರುದ್ಧ ವಾರಂಟ್‌ ಹೊರಡಿಸಿ ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿತು. 


ವಿಚಾರಣಾ ಸಮಿತಿ ಮುಂದೆ ಖುದ್ದಾಗಿ ಅಥವಾ ತಮ್ಮ ಪರ ವಕೀಲರ ಮೂಲಕ ವಿವರಣೆ ನೀಡುವಂತೆ ಈ ಇಬ್ಬರಿಗೂ ಆಯೋಗ ಸೂಚಿಸಿತ್ತು. ಆದರೆ, ಆಯೋಗವು ನೀಡಿದ್ದ ನೋಟಿಸ್‌ಗಳು ಮತ್ತು ನಿಂದನೆ ಪ್ರಕರಣದ ವಿರುದ್ಧ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು. ಕಳೆದ ಜನವರಿಯಲ್ಲಿ ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಪ್ರಕರಣದ ಪ್ರಕ್ರಿಯೆ ಮುಂದುವರಿಸುವಂತೆ ಆಯೋಗಕ್ಕೆ ಸೂಚಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.