ಇಸ್ಲಾಮಾಬಾದ್: ಅಕ್ರಮ ವಿವಾಹ ಪ್ರಕರಣದಲ್ಲಿ ಪಾಕಿಸ್ತಾನದ ನ್ಯಾಯಾಲಯವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರನ್ನು ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ.
ರಾವಲ್ಪಿಂಡಿಯ ಗ್ಯಾರಿಸನ್ ಸಿಟಿಯಲ್ಲಿರುವ ನ್ಯಾಯಾಲಯವು ಈ ಕುರಿತು ತೀರ್ಪು ಪ್ರಕಟಿಸಿದೆ ಎಂದು ಇಮ್ರಾನ್ ಖಾನ್ ಪರ ವಕೀಲ ನಯೀಮ್ ಪಂಜುತಾ ಹೇಳಿದ್ದಾರೆ.
ಇದೇ ಪ್ರಕರಣ ಸಂಬಂಧ 71 ವರ್ಷದ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ (49) ಎಂದೂ ಕರೆಯಲ್ಪಡುವ ಬುಶ್ರಾ ಖಾನ್ ಅವರಿಗೆ ಫೆಬ್ರುವರಿಯಲ್ಲಿ ಏಳು ವರ್ಷ ಜೈಲು ಮತ್ತು ₹5 ಲಕ್ಷ ದಂಡ ವಿಧಿಸಲಾಗಿತ್ತು. ಇಸ್ಲಾಮಿಕ್ ಕಾನೂನನ್ನು ಉಲ್ಲಂಘಿಸಿದ ಆರೋಪದಲ್ಲಿ ನ್ಯಾಯಾಲಯವು ಇಮ್ರಾನ್ ಖಾನ್ ದಂಪತಿ ತಪ್ಪಿತಸ್ಥರೆಂದು ಪರಿಗಣಿಸಲಾಗಿತ್ತು.
ಈ ಪ್ರಕರಣದಲ್ಲಿ ವಿಧಿಸಿರುವ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಇಮ್ರಾನ್ ಖಾನ್ –ಬುಶ್ರಾ ಬೀಬಿ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಜೂನ್ 27ರಂದು ಪಾಕ್ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿತ್ತು.
ಇಸ್ಲಾಂನಲ್ಲಿ ಮರು ವಿವಾಹಕ್ಕೆ ಸಿದ್ಧವಾಗುವ ಮಹಿಳೆಯು ಪತಿಯಿಂದ ವಿಚ್ಛೇದನ ಪಡೆಯುವವರೆಗೂ ಅಥವಾ ಪತಿ ಮೃತರಾಗುವವರೆಗೂ ಕಾಯಬೇಕಾದ್ದು ಕಡ್ಡಾಯ ಎಂದು ಹೇಳಲಾಗಿದೆ. ಈ ಅಂಶವನ್ನೇ ಪ್ರಮುಖವಾಗಿಟ್ಟುಕೊಂಡಿದ್ದ ನ್ಯಾಯಾಲಯವು ವಾದ –ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿತ್ತು.
ಬಳಿಕ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ತಿರಸ್ಕರಿಸಿದರು. ರಾವಲ್ಪಿಂಡಿಯಲ್ಲಿರುವ ಅದಿಯಾಲ ಜೈಲಿನಲ್ಲಿರುವ ದಂಪತಿಯ ಬಿಡುಗಡೆಯ ನಿರೀಕ್ಷೆಯಲ್ಲಿದ್ದವರಿಗೆ, ಈ ಆದೇಶ ತೀವ್ರ ನಿರಾಸೆ ಮೂಡಿಸಿತ್ತು. ಇಮ್ರಾನ್ ಖಾನ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಆದೇ ರೀತಿ ಪತ್ನಿ ಬುಶ್ರಾ ವಿರುದ್ಧವೂ ಹಲವು ಪ್ರಕರಣಗಳಿವೆ.
ಬುಶ್ರಾ ಅವರ ಮಾಜಿ ಪತಿ ಖಾವರ್ ಮನೇಕಾ ಅವರು ದಂಪತಿ ವಿರುದ್ಧ 2023ರ ನವೆಂಬರ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಇದ್ಧತ್‌ನ ಅವಧಿಯಲ್ಲಿ ಪೂರ್ಣಗೊಳಿಸಬೇಕಾದ ಅನಿವಾರ್ಯತೆಯನ್ನು ಬೀಬಿ ಗಮನಿಸದೇ 2018ರಲ್ಲಿ ವಿವಾಹವಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಇಮ್ರಾನ್ ಖಾನ್ ಜೊತೆಗಿನ ವಿವಾಹವನ್ನು ಅಸಿಂಧು ಎಂದು ಘೋಷಿಸಲು ನ್ಯಾಯಾಲಯವನ್ನು ಕೋರಿದ್ದರು.
ಇಮ್ರಾನ್ ಖಾನ್ ಅವರಿಗೆ ಬೀಬಿ ಧಾರ್ಮಿಕ ಮಾರ್ಗದರ್ಶಕರಾಗಿದ್ದರು. ನಿರಂತರ ಭೇಟಿಯಲ್ಲಿ ಈ ಜೋಡಿ ನಡುವೆ ಪ್ರೇಮಾಂಕುರವಾಗಿತ್ತು. ನಂತರ ಬೀಬಿ ಅವರು ತಮ್ಮ ಮಾಜಿ ಪತಿಯೊಂದಿಗಿನ 28 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ಬೀಬಿ ಅವರಿಗೆ ಮೊದಲ ವಿವಾಹದಲ್ಲಿ ಐವರು ಮಕ್ಕಳಿದ್ದಾರೆ. ಇಮ್ರಾನ್ ಖಾನ್ ಅವರಿಗೆ ಬೀಬಿ ಮೂರನೇ ಪತ್ನಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.