ಪೆಶಾವರ: ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಿಗದಿತ ಮೀಸಲು ಸ್ಥಾನಗಳ ಅಭ್ಯರ್ಥಿಗಳ ಪ್ರಮಾಣ ವಚನ ಸ್ವೀಕಾರಕ್ಕೆ ನೀಡಲಾಗಿರುವ ತಡೆಯಾಜ್ಞೆಯನ್ನು ಪಾಕಿಸ್ತಾನದ ಹೈಕೋರ್ಟ್ ಇದೇ 13ರವರೆಗೆ ವಿಸ್ತರಿಸಿ ಗುರುವಾರ ತೀರ್ಪು ನೀಡಿದೆ.
ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಮೀಸಲು ಸ್ಥಾನಗಳ ಹಂಚಿಕೆ ಕುರಿತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್- ಎ- ಇನ್ಸಾಫ್ (ಪಿಟಿಐ) ಪಕ್ಷದ ಬೆಂಬಲಿತ ಸುನ್ನಿ ಇತ್ತೆಹಾದ್ ಕೌನ್ಸಿಲ್ (ಎಸ್‌ಐಸಿ) ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಪೆಶಾವರ ಹೈಕೋರ್ಟ್‌ನ ವಿಭಾಗೀಯ ಪೀಠ ತಡೆಯಾಜ್ಞೆಯನ್ನು ವಿಸ್ತರಿಸಿತು.
ಸಂಸತ್ತಿನಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಮೀಸಲಿರಿಸಿರುವ ಸ್ಥಾನಗಳಿಗೆ ಎಸ್‌ಐಸಿ ಅರ್ಹವಾಗಿಲ್ಲ ಮತ್ತು ಅದರ ಪಾಲನ್ನು ಇತರ ಪಕ್ಷಗಳಿಗೆ ಹಂಚಬೇಕು ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಸೋಮವಾರ ಆದೇಶಿಸಿತ್ತು.
ಈ ಕುರಿತ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ್ದ ಪೆಶಾವರ ಹೈಕೋರ್ಟ್ ಪ್ರಮಾನ ವಚನ ಸ್ವೀಕರಿಸದಂತೆ ತಡೆಯಾಜ್ಞೆ ನೀಡಿತ್ತು. ಆ ತಡೆಯಾಜ್ಞೆಯನ್ನು ಪೀಠವು ಇದೇ 13ರವರೆಗೆ ಗುರುವಾರ ವಿಸ್ತರಿಸಿ, ಮುಂದಿನ ವಿಚಾರಣೆಯನ್ನು 13ಕ್ಕೆ ನಿಗದಿಪಡಿಸಿತು. ಪಾಕಿಸ್ತಾನದ ಅಟಾರ್ನಿ ಜನರಲ್ ಮನ್ಸೂರ್ ಉಸ್ಮಾನ್ ಅವನ್ ಅವರಿಗೆ ಸಮನ್ಸ್ ಜಾರಿಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.