ಕರಾಚಿ: ಪಾಕಿಸ್ತಾನದ ಕರಾಚಿಯ ಮೀನುಗಾರನೊಬ್ಬ ತನಗೆ ಸಿಕ್ಕ ಅಪರೂಪದ ಮೀನನ್ನು ಹರಾಜಿನಲ್ಲಿ ಮಾರಿ ರಾತ್ರಿ ಕಳೆದು ಬೆಳಗಾಗುವದರೊಳಗೆ ಕೋಟ್ಯಧಿಪತಿಯಾಗಿದ್ದಾನೆ.
ಹಾಜಿ ಬಲೂಚ್ ಎನ್ನುವಾತ ಇಬ್ರಾಹಿಂ ಹೈದೇರಿ ಎನ್ನುವ ಗ್ರಾಮದಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಆತನಲ್ಲಿ ಕೆಲಸ ಮಾಡುವವರಿಗೆ ಅರೇಬಿಯನ್ ಸಮುದ್ರದಲ್ಲಿ ಗೋಲ್ಡನ್ ಫಿಶ್ ಅಥವಾ ‘ಸೋವಾ’ ಎನ್ನುವ ಮೀನು ದೊರಕಿತ್ತು.
ಈ ‘ಸೋವಾ’ ಮೀನು ಸೇರಿ ಬಲೆಗೆ ಬಿದ್ದಿದ್ದ ಎಲ್ಲಾ ಮೀನುಗಳನ್ನು ಹಾಜಿ ಕರಾಚಿ ಬಂದರಿನಲ್ಲಿ ಹರಾಜಿಗೆ ಇರಿಸಿ ಬರೋಬ್ಬರಿ ₹7 ಕೋಟಿ (70 ಮಿಲಿಯನ್)ಗೆ ಮಾರಾಟ ಮಾಡಿದ್ದಾನೆ ಎಂದು ಪಾಕಿಸ್ತಾನ ಮೀನುಗಾರರ ವೇದಿಕೆ ಹೇಳಿದೆ.
ಸೋವಾ ಅಥವಾ ಗೋಲ್ಡನ್ ಫಿಶ್ ಬೆಲೆಕಟ್ಟಲಾಗದ ಮತ್ತು ಅತಿ ಅಪರೂಪದ ಮೀನಾಗಿದ್ದು, ಇದನ್ನು ಅನೇಕ ಔಷಧಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಅಲ್ಲದೆ ಈ ಮೀನಿನ ದಾರದಂತಹ ವಸ್ತುವನ್ನು ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಸಹ ಬಳಸಲಾಗುತ್ತದೆ.
‘ಒಂದು ಮೀನು ಹರಾಜಿನಲ್ಲಿ ಸುಮಾರು ₹70 ಲಕ್ಷಕ್ಕೆ (7 ಮಿಲಿಯನ್) ರೂಪಾಯಿಗಳನ್ನು ಪಡೆಯುತ್ತದೆ. ಈ ಮೀನು ಸಾಮಾನ್ಯವಾಗಿ 20 ರಿಂದ 40 ಕೆ.ಜಿ ತೂಗುವ ಮತ್ತು 1.5 ಮೀಟರ್‌ಗಳವರೆಗೆ ಬೆಳೆಯುತ್ತದೆ. ಪೂರ್ವ ಏಷ್ಯಾದ ದೇಶಗಳಲ್ಲಿ ಈ ಮೀನಿಗೆ ಹೆಚ್ಚು ಬೇಡಿಕೆಯಿದೆ.
ಈ ಮೀನು ಕರಾವಳಿಯ ಬಳಿ ಸಂತಾನೋತ್ಪತ್ತಿಯ ವೇಳೆಯಲ್ಲಿ ಮಾತ್ರ ಕಂಡುಬರುತ್ತದೆ ಎನ್ನುವ ಹಾಜಿ, ಹರಾಜಿನಲ್ಲಿ ಬಂದಿರುವ ಹಣವನ್ನು ತಮ್ಮೊಂದಿಗೆ ಕೆಲಸ ಮಾಡುವ ಸಿಬ್ಬಂದಿ ಜತೆಗೆ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.