ಇಸ್ಲಾಮಾಬಾದ್: ಪ್ರಮುಖ ವಿರೋಧ ಪಕ್ಷ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ‘ಪಾಕಿಸ್ತಾನ್ ತೆಹ್ರಿಕ್–ಎ–ಇನ್ಸಾಫ್’ (ಪಿಟಿಐ) ಪಕ್ಷವನ್ನು ನಿಷೇಧ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಸೋಮವಾರ ಹೇಳಿದೆ. ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಹೊರಿಸಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
‘ಪಿಟಿಐ ಪಕ್ಷವು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ. ಹೀಗಾಗಿ ಫೆಡರಲ್ ಸರ್ಕಾರವು (ಕೇಂದ್ರ ಸರ್ಕಾರ) ಅದನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಂಡಿದೆ’ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್ ಹೇಳಿದ್ದಾರೆ.
‘ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವುದಕ್ಕೆ ಸ್ಪಷ್ಟ ಸಾಕ್ಷ್ಯಗಳಿದ್ದು, ತೆಹ್ರಿಕ್–ಎ–ಇನ್ಸಾಫ್ ಪಕ್ಷವನ್ನು ನಿಷೇಧಿಸುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಲಿದೆ’ ಎಂದು ತರಾರ್ ಹೇಳಿದ್ದಾರೆ.
ಅಕ್ರಮ ಮದುವೆ ಸೇರಿ ಹಲವು ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಅವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದ ಬೆನ್ನಲ್ಲೇ ಸರ್ಕಾರದಿಂದ ಈ ನಿರ್ಧಾರ ಹೊರಬಿದ್ದಿದೆ.
ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ 71 ವರ್ಷದ ಇಮ್ರಾನ್ ಖಾನ್ ಅವರು ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.