ಇಸ್ಲಾಮಾಬಾದ್: ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡುವವರೆಗೂ ಸಂಸತ್‌ನಲ್ಲಿ ಧರಣಿ ನಡೆಸಲು ಪಾಕಿಸ್ತಾನದ ವಿರೋಧ ಪಕ್ಷಗಳು ನಿರ್ಧರಿಸಿವೆ.
ಈ ಕುರಿತು ಟ್ವೀಟ್ ಮಾಡಿರುವ ಪಾಕಿಸ್ತಾನ್ ಪೀಪಲ್ಸ್ ಪಕ್ಷದ ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ, ‘ಪಾಕಿಸ್ತಾನ ಸಂಸತ್ತಿನ ಉಪ ಸಭಾಪತಿ ಖಾಸಿಮ್ ಸೂರಿ ಅವರು ಅವಿಶ್ವಾಸ ನಿರ್ಣಯ ಪ್ರಕ್ರಿಯೆಗೆ ಅವಕಾಶ ನೀಡಿಲ್ಲ. ಸರ್ಕಾರವು ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿದೆ’ ಎಂದು ಹರಿಹಾಯ್ದಿದ್ದಾರೆ.
ಉಪ ಸಭಾಪತಿ ನಿರ್ಧಾರದ ವಿರುದ್ಧ ಪ್ರತಿಪಕ್ಷಗಳು ಧರಣಿ ನಡೆಸಲಿವೆ. ಈ ಸಂಬಂಧ ನಮ್ಮ ವಕೀಲರು ಸುಪ್ರೀಂ ಕೋರ್ಟ್‌ನ ಮೊರೆ ಹೋಗಲಿದ್ದಾರೆ. ಪಾಕಿಸ್ತಾನದ ಸಂವಿಧಾನವನ್ನು ರಕ್ಷಿಸುವ ಮತ್ತು ಎತ್ತಿಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಎಲ್ಲಾ ಸಂಸ್ಥೆಗಳಿಗೆ ನಾವು ಕರೆ ನೀಡುತ್ತೇವೆ’ ಎಂದು ಭುಟ್ಟೋ ತಿಳಿಸಿದ್ದಾರೆ.
ಅಧ್ಯಕ್ಷ ಆರಿಫ್ ಅಲ್ವಿ ಅವರು ಪಾಕಿಸ್ತಾನದ ಸಂಸತ್ತನ್ನು ವಿಸರ್ಜನೆ ಮಾಡಿದ್ದು, 3 ತಿಂಗಳ ಒಳಗೆ ಚುನಾವಣೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಪಾಕಿಸ್ತಾನದ ಜನರು ಚುನಾವಣೆಗೆ ಅಣಿಯಾಗುವಂತೆ ಇಮ್ರಾನ್ ಖಾನ್ ಮನವಿ ಮಾಡಿದ್ದಾರೆ.
ಇಮ್ರಾನ್ ಅವರು ತಮ್ಮ ಸ್ಥಾನ ಉಳಿಸಿಕೊಳ್ಳಬೇಕಾದರೆ ಸಂಸತ್‌ನಲ್ಲಿ ಕನಿಷ್ಠ 172 ಮತ ಗಳಿಸಬೇಕಾಗುತ್ತದೆ. ವಿರೋಧ ಪಕ್ಷಗಳ ಒಟ್ಟು ಬಲ 163ರಷ್ಟಿದ್ದು, ಇಮ್ರಾನ್ ಪಕ್ಷದ ಬಂಡಾಯ ಸಂಸದರು ವಿರೋಧ ಪಕ್ಷಗಳ ಜೊತೆ ಕೈಜೋಡಿಸಿದರೆ ಸರ್ಕಾರ ಪತನವಾಗುವ ಸಾಧ್ಯತೆ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.