ಲಾಹೋರ್: ಪಾಕಿಸ್ತಾನ ರಾಷ್ಟ್ರೀಯ ಸಂಸತ್ತಿಗೆ ಈ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಯಿಂದ ಪ್ರಧಾನಿ ಅಭ್ಯರ್ಥಿಯಾಗಿ ಪಕ್ಷದ ಅಧ್ಯಕ್ಷ ಬಿಲಾವಲ್ ಭುಟ್ಟೊ ಝರ್ದಾರಿ ಅವರನ್ನು ಘೋಷಿಸಲಾಗಿದೆ ಎಂದು ವರದಿಯಾಗಿದೆ.
ಫೆ. 8ರಂದು ಪಾಕಿಸ್ತಾನದ ರಾಷ್ಟ್ರೀಯ ಸಂಸತ್‌ಗೆ ಚುನಾವಣೆ ನಡೆಯಲಿದೆ. ಚುನಾವಣೆ ಸಿದ್ಧತೆ ಕುರಿತು ಪಿಪಿಪಿ ಸಭೆ ನಡೆಸಿದೆ. ಪಕ್ಷದ ಪ್ರಣಾಳಿಕೆ, ಪ್ರಚಾರ ಕಾರ್ಯದ ಕುರಿತು ಸಭೆಯಲ್ಲಿ ಚರ್ಚೆಗಳು ನಡೆದವು. ಮಹಿಳೆಯರು ಹಾಗೂ ಯುವಜನತೆಯ ಸಬಲೀಕರಣ, ಉದ್ಯೋಗ, ಆರೋಗ್ಯ ಹಾಗು ಶಿಕ್ಷಣಕ್ಕೆ ಆದ್ಯತೆ ನೀಡಲು ತೀರ್ಮಾನಿಸಲಾಯಿತು ಎಂದು ದಿ ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.
ಸಭೆಯ ನಂತರ ನಡೆದ ಚರ್ಚೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಬಿಲಾವಲ್ ಅವರ ಹೆಸರನ್ನು ಸದಸ್ಯರು ಒಮ್ಮತದಿಂದ ಅಂಗೀಕರಿಸಿದರು. ಮುಖ್ಯಸ್ಥ ಆಸೀಫ್ ಅಲಿ ಝರ್ದಾರಿ ಹಾಗೂ ಚೇರ್ಮನ್ ಬಿಲಾವಲ್ ಭುಟ್ಟೊ ಝರ್ದಾರಿ ಇದ್ದರು.
35 ವರ್ಷದ ಬಿಲಾವಲ್ ಅವರು ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೊ ಅವರ ಪುತ್ರ. ಲಾಹೋರ್ ಕ್ಷೇತ್ರದಿಂದ ಪಾಕಿಸ್ತಾನ ಮುಸ್ಲೀಂ ಲೀಗ್–ನವಾಜ್‌ನ ನಾಯಕ ಶಯಿಸ್ತಾ ಪರ್ವೇಜ್ ಮಲ್ಲಿಕ್ ವಿರುದ್ಧ ಸ್ಪರ್ಧಿಸಲು ಇವರು ಸಿದ್ಧತೆ ನಡೆಸಿದ್ದಾರೆ. ಶಯಿಸ್ತಾಗೆ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಬೆಂಬಲ ವ್ಯಕ್ತಪಡಿಸಿದೆ.
‘ಪಿಎಂಎಲ್–ಎನ್ ಮತ್ತು ಪಿಟಿಐ ಪಕ್ಷಗಳು ಆಡಳಿತಾರೂಢ ಪಕ್ಷದ ಪ್ರತಿನಿಧಿಗಳೇ ಆಗಿವೆ. ದೇಶದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಈ ಪಕ್ಷಗಳು ವಿಫಲವಾಗಿವೆ’ ಎಂದು ಬಿಲಾವಲ್ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.