ಇಸ್ಲಾಮಾಬಾದ್: ಭಯೋತ್ಪಾದಕ ಒಸಾಮ ಬಿನ್ ಲಾಡೆನ್‌ನನ್ನು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ‘ಶಹೀದ್ (ಹುತಾತ್ಮ)’ ಎಂದು ಬಣ್ಣಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಲಾಡೆನ್‌ನನ್ನು ಇಮ್ರಾನ್ ಖಾನ್ ಅವರು ಶಹೀದ್ ಎಂದು ಕರೆದಿದ್ದಾರೆ. ಲಾಡೆನ್ ನಮ್ಮ ದೇಶಕ್ಕೆ ಭಯೋತ್ಪಾದನೆ ತಂದವ. ಆತ ಭಯೋತ್ಪಾದಕ. ಆತನನ್ನು ಪ್ರಧಾನಿ ಶಹೀದ್ ಎಂದು ಕರೆಯುವುದೇ? ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್‌ನ(ಎನ್) ಹಿರಿಯ ನಾಯಕ ಖ್ವಾಜಾ ಆಸಿಫ್ ಸಂಸತ್ ಅಧಿವೇಶನದಲ್ಲಿ ಪ್ರಶ್ನಿಸಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
‘ಭಯೋತ್ಪಾದನೆಯಿಂದಾಗಿ ಇಡೀ ವಿಶ್ವದಲ್ಲಿ ಮುಸ್ಲಿಮರು ತಾರತಮ್ಯ ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ, ಒಸಾಮ ಬಿನ್ ಲಾಡೆನ್‌ನನ್ನು ಹುತಾತ್ಮ ಎಂದು ಕರೆಯುವ ಮೂಲಕ ಪ್ರಧಾನಿಯವರು ಮತ್ತಷ್ಟು ಸಮಸ್ಯೆ ಸೃಷ್ಟಿಸಿದ್ದಾರೆ’ ಎಂದು ಪಾಕಿಸ್ತಾನದ ಹೋರಾಟಗಾರ್ತಿ ಮೀನಾ ಗಬೀನಾ ಟ್ವೀಟ್ ಮಾಡಿದ್ದಾರೆ.
ಆದರೆ, ಇ್ರಮಾನ್ ಖಾನ್ ಮಾತನ್ನು ಅವರ ರಾಜಕೀಯ ಸಂವಹನ ವಿಶೇಷ ಸಹಾಯಕ ಡಾ. ಶಾಬಾಜ್ ಗಿಲ್ ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿಯವರು ಮಾತನಾಡುವಾಗ ಎರಡು ಬಾರಿ ‘ಹತ್ಯೆಯಾದ’ ಎಂಬ ಪದ ಬಳಸಿದ್ದರು. ದೇಶದೊಳಗೆ ಮತ್ತು ವಿದೇಶಗಳಲ್ಲಿ ಅನಗತ್ಯವಾಗಿ ಅವರ ಮಾತಿನ ವಿಚಾರವಾಗಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಅವರು ಗುರುವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಗುರುವಾರ ಮಾತನಾಡಿದ್ದ ಇಮ್ರಾನ್ ಖಾನ್, ‘ನಮಗೆ ಗೊತ್ತಿಲ್ಲದೇ ಅಮೆರಿಕ ಸೇನೆ ಅಬೊಟಾಬಾದ್‌ಗೆ ಬಂದು ಒಸಾಮ ಬಿನ್ ಲಾಡೆನ್ ಅವರನ್ನು ಹತ್ಯೆ ಮಾಡಿತ್ತು. ಲಾಡೆನ್ ಹುತಾತ್ಮರಾದರು. ಆಗ ನಾವು ಜಾಗತಿಕವಾಗಿ ಅಪಮಾನಕ್ಕೀಡಾದೆವು,’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.