ADVERTISEMENT

ಪಾಕಿಸ್ತಾನದ ನೂತನ ಪ್ರಧಾನಿಯ ಮೊದಲ ಭಾಷಣದಲ್ಲಿ ಕಾಶ್ಮೀರ ಪ್ರಸ್ತಾಪ

ಪಿಟಿಐ
Published 11 ಏಪ್ರಿಲ್ 2022, 17:20 IST
Last Updated 11 ಏಪ್ರಿಲ್ 2022, 17:20 IST
ಶಾಹಬಾಝ್ ಷರೀಫ್
ಶಾಹಬಾಝ್ ಷರೀಫ್   

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿಯಾಗಿ ಸೋಮವಾರ ಆಯ್ಕೆಯಾದ ಶಾಹಬಾಝ್ ಷರೀಫ್ ಅವರು ಮಾಡಿದ ತಮ್ಮ ಮೊದಲ ಭಾಷಣದಲ್ಲಿ ಕಾಶ್ಮೀರದ ವಿಶೇಷಾಧಿಕಾರ ರದ್ದತಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಕಾಶ್ಮೀರದ ಜನರಿಗೆ ರಾಜತಾಂತ್ರಿಕ, ನೈತಿಕ ಬೆಂಬಲ ನೀಡುವುದರ ಜೊತೆಗೆ ಎಲ್ಲ ಅಂತರರಾಷ್ಟ್ರೀಯ ವೇದಿಕೆಗಳಿಗೆ ಈ ವಿಚಾರವನ್ನು ಒಯ್ಯುವ ಭರವಸೆ ನೀಡಿದ್ದಾರೆ.

ಭಾರತದ ಜೊತೆ ಉತ್ತಮ ಸಂಬಂಧ ಹೊಂದುವ ಉದ್ದೇಶವಿದೆ ಎಂದಿರುವ ಶಾಹಬಾಝ್, ಕಾಶ್ಮೀರ ವಿಷಯ ಇತ್ಯರ್ಥವಾಗದಿದ್ದರೆ ಇದು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

‘ನಮ್ಮ ದೇಶದ ಪಕ್ಕದಲ್ಲಿ ಯಾರಿರಬೇಕು ಎಂದು ಆಯ್ಕೆ ಮಾಡಲಾಗದು. ನಾವು ನೆರೆಹೊರೆಯವರಾಗಿ ಇರಬೇಕಷ್ಟೇ. ಆದರೆ, ದೇಶ ಉದಯವಾದ ದಿನದಿಂದಲೂ ಭಾರತದ ಜೊತೆಗೆ ಪಾಕಿಸ್ತಾನದ ಸಂಬಂಧ ಉತ್ತಮವಾಗಿಲ್ಲ. ಇದು ದುರದೃಷ್ಟಕರ ವಿಚಾರ’ ಎಂದು ಶಾಹಬಾಝ್‌ ಹೇಳಿದ್ದಾರೆ.

ADVERTISEMENT

ಕಾಶ್ಮೀರದ ವಿಶೇಷಾಧಿಕಾರ ರದ್ದುಪಡಿಸಿದ ಭಾರತದ ವಿರುದ್ಧ ಇಮ್ರಾನ್ ಖಾನ್ ಅವರು ಯಾವುದೇ ಗಂಭೀರ ರಾಜತಾಂತ್ರಿಕ ಯತ್ನಗಳನ್ನು ಮಾಡಲಿಲ್ಲ ಎಂದು ನೂತನ ಪ್ರಧಾನಿ ಆರೋಪಿಸಿದರು. ‘ಬಲವಂತದ ಅತಿಕ್ರಮಣ ನಡೆದಾಗ ನಮ್ಮಿಂದ ಏನೂ ಮಾಡಲಾಗಲಿಲ್ಲ. ಕಾಶ್ಮೀರದ ಜನರ ರಕ್ತವು ರಸ್ತೆಗಳಲ್ಲಿ ಹರಿಯಿತು. ಕಣಿವೆಯು ರಕ್ತದಿಂದ ಕೆಂಪಾಯಿತು’ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗಡಿಭಾಗದ ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಶಾಹಬಾಝ್‌ ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.