ADVERTISEMENT

ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದು ಷರತ್ತನ್ನೂ ಮುಂದಿಟ್ಟ ಇಮ್ರಾನ್‌ ಖಾನ್

ರಾಯಿಟರ್ಸ್
Published 5 ಜೂನ್ 2021, 7:04 IST
Last Updated 5 ಜೂನ್ 2021, 7:04 IST
ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ (ರಾಯಿಟರ್ಸ್‌ ಚಿತ್ರ)
ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ (ರಾಯಿಟರ್ಸ್‌ ಚಿತ್ರ)   

ಇಸ್ಲಾಮಾಬಾದ್‌: ‘ಕಾಶ್ಮೀರದ ಹಿಂದಿನ ಸ್ಥಿತಿಯನ್ನು ಮರಳಿಸ್ಥಾಪಿಸಲು ಭಾರತ ಪ್ರಯತ್ನ ನಡೆಸಿದ್ದೇ ಆದರೆ,ಮಾತುಕತೆ ಪುನರಾರಂಭಿಸಲು ನಾವು ಸಿದ್ಧವಾಗಿದ್ದೇವೆ,’ ಎಂದು ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಹೇಳಿದ್ದಾರೆ.

ಕಾಶ್ಮೀರದ ಮೇಲಿನ ತನ್ನ ಹಿಡಿತವನ್ನು ಬಿಗಿಗೊಳಿಸುವ ಕ್ರಮವಾಗಿ ಭಾರತ ಸರ್ಕಾರವು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ತೆಗೆದು ಹಾಕಿದೆ. ಭಾರತದ ಈ ನಡೆ ಪಾಕಿಸ್ತಾನವನ್ನು ಕೆರಳಿಸಿತ್ತು. ಹೀಗಾಗಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಹದಗೆಟ್ಟಿವೆ.

‘ಕಾಶ್ಮೀರದ ವಿಚಾರದಲ್ಲಿ ಒಂದು ಮಾರ್ಗಸೂಚಿ ಇದ್ದಿದ್ದೇ ಆದರೆ, ಹೌದು, ನಾವು ಮಾತನಾಡುತ್ತೇವೆ‘ ಎಂದು ಖಾನ್ ಇಸ್ಲಾಮಾಬಾದ್‌ನ ತನ್ನ ಅಧಿಕೃತ ನಿವಾಸದಲ್ಲಿ ಸುದ್ದಿ ಸಂಸ್ಥೆ ‘ರಾಯಿಟರ್ಸ್‌‘ಗೆ ತಿಳಿಸಿದ್ದಾರೆ.

ನಾವು ಈ ಹಿಂದಿನ ಪರಿಸ್ಥಿತಿಗೆ ಮರಳಬೇಕಿದ್ದರೆ, ಭಾರತವು ಕಾಶ್ಮೀರದ ವಿಚಾರದಲ್ಲಿ ತಾನು ತೆಗೆದುಕೊಂಡಿರುವ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಪಾಕಿಸ್ತಾನ ಈ ಹಿಂದೆ ಹೇಳಿತ್ತು.

'ಭಾರತ ಕೈಗೊಂಡ ಕ್ರಮ ಕಾನೂನುಬಾಹಿರವಾಗಿದೆ, ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ನಿರ್ಣಯಗಳಿಗೆ ವಿರುದ್ಧವಾಗಿದೆ. ಅದರಿಂದ ಭಾರತ ಹಿಂದೆ ಸರಿದಿದರೆ ಆಗ ಅದು ಒಪ್ಪಿತವಾಗುತ್ತದೆ’ ಎಂದು ಖಾನ್ ಹೇಳಿದರು.

‘ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಮೂಲಕ ಭಾರತವು ಎಲ್ಲೆಗಳನ್ನು ಮೀರಿದೆ. ನಾವು ಮಾತುಕತೆ ಆರರಂಭಿಸಬೇಕಿದ್ದರೆ, ಭಾರತ ತನ್ನ ನಿರ್ಧಾರ ಕೈಬಿಡಬೇಕು,‘ ಎಂದು ಈ ಹಿಂದೆಯೂ ಖಾನ್‌ ಆಗ್ರಹಿಸಿದ್ದರು.

ಇಮ್ರಾನ್‌ ಖಾನ್‌ ಅವರ ಈ ಹೇಳಿಕೆ ಕುರಿತು ಭಾರತದ ವಿದೇಶಾಂಗ ವ್ಯವಹಾರ ಇಲಾಖೆ ಪ್ರತಿಕ್ರಿಯಿಸಿಲ್ಲ. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.