ADVERTISEMENT

ಪಾಕಿಸ್ತಾನ | ರೈಲು ನಿಲ್ದಾಣದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ; 26 ಸಾವು

ಪಿಟಿಐ
Published 9 ನವೆಂಬರ್ 2024, 14:57 IST
Last Updated 9 ನವೆಂಬರ್ 2024, 14:57 IST
<div class="paragraphs"><p>ಬಾಂಬ್ ದಾಳಿ ನಡೆದ ರೈಲು ನಿಲ್ದಾಣ</p></div>

ಬಾಂಬ್ ದಾಳಿ ನಡೆದ ರೈಲು ನಿಲ್ದಾಣ

   

– ಎಕ್ಸ್ ಚಿತ್ರ

ಕ್ವೆಟ್ಟಾ: ಪಾಕಿಸ್ತಾನದ ಕ್ವೆಟ್ಟಾ ನಗರದ ರೈಲು ನಿಲ್ದಾಣದಲ್ಲಿ ಶನಿವಾರ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ 14 ಸೈನಿಕರು ಸೇರಿದಂತೆ 26 ಜನರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ 60 ಮಂದಿ ಗಾಯಗೊಂಡಿದ್ದಾರೆ. 

ADVERTISEMENT

ದಾಳಿಯ ಹೊಣೆ ಹೊತ್ತುಕೊಂಡಿರುವ ‘ಬಲೂಚ್‌ ಲಿಬರೇಶನ್‌ ಆರ್ಮಿ’ (ಬಿಎಲ್‌ಎ) ಪ್ರತ್ಯೇಕತಾವಾದಿ ಸಂಘಟನೆಯು, ಪಾಕಿಸ್ತಾನದ ಸೇನೆಯನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹೇಳಿದೆ. 

ಬೆಳಿಗ್ಗೆ 9ಕ್ಕೆ ಕ್ವೆಟ್ಟಾದಿಂದ ಪೆಶಾವರಕ್ಕೆ ಹೊರಡಬೇಕಿದ್ದ ಜಾಫರ್‌ ಎಕ್ಸ್‌ಪ್ರೆಸ್‌ ರೈಲು ಏರಲು ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಜಮಾಯಿಸಿದ್ದರು. ಕ್ವೆಟ್ಟಾದ ಆರ್ಮಿ ಸ್ಕೂಲ್‌ನಲ್ಲಿ ತರಬೇತಿ ಪೂರೈಸಿ ರೈಲಿನಲ್ಲಿ ತೆರಳಬೇಕಿದ್ದ ಸೈನಿಕರೂ ಅಲ್ಲಿದ್ದರು. ಬೆಳಿಗ್ಗೆ 8.45ರ ಸುಮಾರಿಗೆ ಬಾಂಬ್‌ ಸ್ಫೋಟಗೊಂಡಿದೆ.  

ಸ್ಫೋಟದ ಪರಿಣಾಮ ರೈಲು ನಿಲ್ದಾಣದ ಚಾವಣಿ ಹಾನಿಗೊಳಗಾಗಿದೆ. ‘ಘಟನಾ ಸ್ಥಳಕ್ಕೆ ತೆರಳಿದಾಗ ಅಲ್ಲಿ ರಕ್ತದ ಹೊಳೆಯೇ ಹರಿದಂತಿತ್ತು. ದೇಹದ ಅಂಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು’ ಎಂದು ವರದಿಗಾರರು ಸ್ಫೋಟದ ತೀವ್ರತೆಯನ್ನು ಬಿಚ್ಚಿಟ್ಟಿದ್ದಾರೆ. 

‘ದಾಳಿಕೋರನು ಲಗೇಜ್‌ನೊಂದಿಗೆ ನಿಲ್ದಾಣ ಪ್ರವೇಶಿಸಿದ್ದ. ಆರಂಭದಲ್ಲಿ ಲಗೇಜ್‌ನಲ್ಲಿ ಬಾಂಬ್‌ ತಂದು ಸ್ಫೋಟಿಸಲಾಗಿದೆ ಎಂದು ಭಾವಿಸಲಾಗಿತ್ತು. ಬಳಿಕ ಇದೊಂದು ಆತ್ಮಾಹುತಿ ಬಾಂಬ್‌ ದಾಳಿ ಎಂಬುದು ತಿಳಿದು ಬಂದಿದೆ. ಈ ಕುರಿತು ತನಿಖೆ ಆರಂಭಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ಬಾಂಬ್‌ ದಾಳಿಯನ್ನು ಖಂಡಿಸಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್‌ ‘ದಾಳಿಕೋರರು ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಸರ್ಕಾರವು ಅಭಿವೃದ್ಧಿ ಮಾಡದೆ ಕೇವಲ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಬಲೂಚ್‌ ಲಿಬರೇಶನ್‌ ಆರ್ಮಿ ಆರೋ‍ಪಿಸಿದೆ. ಇದನ್ನು ಸರ್ಕಾರ ತಳ್ಳಿ ಹಾಕಿದೆ.

ಅಮಾಯಕ ನಾಗರಿಕರನ್ನು ಗುರಿಯಾಗಿಸಿ ನಡೆಸಿರುವ ಈ ಭಯಾನಕ ದಾಳಿಯನ್ನು ಖಂಡೀಸುತ್ತೇನೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
–ಸರ್ಫ್‌ರಾಜ್‌ ಬುಗ್ಟಿ, ಬಲೂಚಿಸ್ತಾನ ಮುಖ್ಯಮಂತ್ರಿ 
ಹಿಂಸಾಚಾರ ಪ್ರಕರಣ ಹೆಚ್ಚಳ
ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಪಾಕಿಸ್ತಾನದಲ್ಲಿ ಹಿಂಸಾಚಾರ ಪ್ರಕರಣಗಳ ಪ್ರಮಾಣವು ಶೇ90 ರಷ್ಟು ಏರಿಕೆಯಾಗಿದೆ ಎಂದು ‘ಸಂಶೋಧನೆ ಮತ್ತು ಭದ್ರತಾ ಅಧ್ಯಯನ ಕೇಂದ್ರ’ ತಿಳಿಸಿರುವುದಾಗಿ ಎಂದು ಜಿಯೋ ನ್ಯೂಸ್‌ ವರದಿ ಮಾಡಿದೆ. 328 ಘಟನೆಗಳಲ್ಲಿ ನಾಗರಿಕರು ಭದ್ರತಾ ಪಡೆ ಸಿಬ್ಬಂದಿ ಹಾಗೂ ಉಗ್ರರು ಸೇರಿದಂತೆ ಒಟ್ಟು 722 ಜನರು ಸಾವಿಗೀಡಾಗಿದ್ದಾರೆ. ಈ ಪೈಕಿ ಶೇ 97ರಷ್ಟು ಘಟನೆಗಳು ಬಲೂಚಿಸ್ತಾನ ಹಾಗೂ ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿ ನಡೆದಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.