ಇಸ್ಲಾಮಾಬಾದ್: ‘ನಿರ್ವಹಣೆಯ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಆಕಸ್ಮಿಕವಾಗಿ ಹಾರಿದ ಕ್ಷಿಪಣಿ ಪಾಕಿಸ್ತಾನದ ನೆಲಕ್ಕೆ ಅಪ್ಪಳಿಸಿದೆ ಎಂಬ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ಒಪ್ಪಲಾಗದು. ಈ ವಿಷಯ ಕುರಿತು ಜಂಟಿ ತನಿಖೆ ನಡೆಸಬೇಕು’ ಎಂದು ಪಾಕಿಸ್ತಾನವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಮಂಗಳವಾರ ಹೇಳಿದ್ದಾರೆ.
‘ಈ ಘಟನೆ ಕುರಿತು ರಾಜನಾಥ್ ಸಿಂಗ್ ಅವರು ಸಂಸತ್‌ನಲ್ಲಿ ನೀಡಿರುವ ಪ್ರತಿಕ್ರಿಯೆ ಅಸಮರ್ಪಕ. ಘಟನೆ ಕುರಿತು ಜಂಟಿ ತನಿಖೆಯೇ ಆಗಬೇಕು ಎಂಬುದು ನಮ್ಮ ಬೇಡಿಕೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಪುನರುಚ್ಚರಿಸಿದರು.
‘ರಾಜನಾಥ್ ಸಿಂಗ್ ಅವರ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲ. ಕ್ಷಿಪಣಿ ಹಾರಿ ನಮ್ಮ ನೆಲದ ಮೇಲೆ ಬಿದ್ದಿರುವುದು ಬೇಜವಾಬ್ದಾರಿಯನ್ನು ತೋರಿಸುತ್ತದೆ. ಈ ಘಟನೆ ಕುರಿತು ಭಾರತ ನೀಡಿರುವ ಉತ್ತರ ಸಹ ಬೇಜವಾಬ್ದಾರಿಯಿಂದ ಕೂಡಿದೆ’ ಎಂದರು.
‘ಪಾಕಿಸ್ತಾನದ ನೆಲದ ಮೇಲೆ ಬಿದ್ದಿರುವ ಭಾರತದ ಕ್ಷಿಪಣಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದ್ದು, ಭಾರಿ ಅನಾಹುತಕ್ಕೂ ಕಾರಣವಾಗಬಹುದಿತ್ತು. ಅಲ್ಲದೇ, ಘಟನೆಯ ಗಂಭೀರತೆಯನ್ನು ಗ್ರಹಿಸುವಲ್ಲಿ ಜಾಗತಿಕ ಸಮುದಾಯ ಕೂಡ ವಿಫಲವಾಗಿದೆ’ ಎಂದು ಖುರೇಷಿ ವಿಷಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.