ADVERTISEMENT

ಐಎಂಎಫ್ ಹಣಕಾಸು ನೆರವಿಗಾಗಿ ಉಕ್ರೇನ್‌ಗೆ ಯುದ್ಧ ಸಲಕರಣೆ: ಆರೋಪ ಅಲ್ಲಗಳೆದ ಪಾಕ್

ತನಿಖಾ ವರದಿಯ ಆರೋಪ ತಳ್ಳಿಹಾಕಿದ ಪಾಕಿಸ್ತಾನ

ಪಿಟಿಐ
Published 19 ಸೆಪ್ಟೆಂಬರ್ 2023, 11:15 IST
Last Updated 19 ಸೆಪ್ಟೆಂಬರ್ 2023, 11:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್: ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ನೆರವು ಪಡೆಯುವ ನಿಟ್ಟಿನಲ್ಲಿ ಪಾಕಿಸ್ತಾನವು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಮಾರಾಟ ಮಾಡಿದೆ ಎಂದು ತನಿಖಾ ವೆಬ್‌ಸೈಟ್ ಮಾಡಿರುವ ವರದಿಯನ್ನು ಪಾಕಿಸ್ತಾನದ ವಿದೇಶಾಂಗ ಕಚೇರಿ ಅಲ್ಲಗೆಳೆದಿದೆ. 

ರಹಸ್ಯವಾಗಿ ಶಸ್ತ್ರಾಸ್ತ್ರಗಳನ್ನು ಅಮೆರಿಕಕ್ಕೆ ಮಾರಾಟ ಮಾಡಿದ್ದರಿಂದಾಗಿ ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಹಣಕಾಸು ನೆರವು ಪಡೆಯಲು ನೆರವಾಗಿದೆ. ಉಕ್ರೇನ್ ಸೇನೆಗೆ ನೆರವಾಗುವ ನಿಟ್ಟಿನಲ್ಲಿ ಅಮೆರಿಕಕ್ಕೆ ಪಾಕಿಸ್ತಾನ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿತ್ತು ಎಂದು ‘ಇಂಟರ್‌ಸೆಪ್ಟ್’ ಎಂಬ ತನಿಖಾ ವೆಬ್‌ಸೈಟ್ ಭಾನುವಾರ ವರದಿ ಮಾಡಿತ್ತು.

ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಝಹ್ರಾ ಬಲೋಚ್, ‘ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಸುಮಾರು 25 ಸಾವಿರ ಕೋಟಿ (3 ಬಿಲಿಯನ್ ಅಮೆರಿಕ ಡಾಲರ್) ನೆರವು ಪಡೆಯಲು ಶಸ್ತ್ರಾಸ್ತ್ರ ಪೂರೈಸಲಾಗಿದೆ ಎಂಬ ‘ಇಂಟರ್‌ಸೆಪ್ಟ್’ ವೆಬ್‌ಸೈಟ್ ವರದಿಯು ಆಧಾರರಹಿತ ಮತ್ತು ಕಟ್ಟುಕಥೆಯಾಗಿದೆ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 

ADVERTISEMENT

ರಷ್ಯಾ ಮತ್ತು ಉಕ್ರೇನ್ ರಾಷ್ಟ್ರಗಳ ನಡುವಣ ಯುದ್ಧದ ವಿಚಾರದಲ್ಲಿ ಪಾಕಿಸ್ತಾನವು ‘ಕಠಿಣ ತಟಸ್ಥ’ ನೀತಿಯನ್ನು ಅನುಸರಿಸುತ್ತಿದ್ದು, ಯಾವುದೇ ದೇಶಕ್ಕೆ ಯಾವುದೇ ಶಸ್ತ್ರಾಸ್ತ್ರ ಅಥವಾ ಮದ್ದು ಗುಂಡುಗಳನ್ನು ಪೂರೈಸಿಲ್ಲ ಎಂದು ಬಲೂಚ್ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.