ಕರಾಚಿ: ಸೌಹಾರ್ದತೆಯ ಸಂಕೇತವಾಗಿ ಪಾಕಿಸ್ತಾನ ಭಾನುವಾರು ಭಾರತದ 100 ಮೀನುಗಾರರನ್ನು ಬಿಡುಗಡೆ ಮಾಡಿದೆ.
ಈ ತಿಂಗಳಲ್ಲಿ ನಾಲ್ಕು ಹಂತಗಳಲ್ಲಿ 360 ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಪಾಕ್ ತಿಳಿಸಿತ್ತು.
360 ಕೈದಿಗಳಲ್ಲಿ 355 ಮಂದಿ ಮೀನುಗಾರರು. ಸಾಗರೋತ್ತರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇವರನ್ನು ಬಂಧಿಸಲಾಗಿತ್ತು.
ಬಿಡುಗಡೆಯಾದ ಮೀನುಗಾರರನ್ನು ಬಿಗಿ ಭದ್ರತೆಯಲ್ಲಿ ಕರಾಚಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಕರೆತರಲಾಯಿತು. ಲಾಹೋರ್‌ಗೆ ಬಂದಿಳಿದ ಅವರನ್ನು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.
ಪಾಕಿಸ್ತಾನದ ಎದಿ ಸ್ವಯಂ ಸೇವಾ ಸಂಸ್ಥೆ ಮೀನುಗಾರರಿಗೆ ಉಡುಗೊರೆ ನೀಡಿದ್ದು, ಪ್ರಯಾಣ ವೆಚ್ಚ ಭರಿಸಿದೆ.
ಏಪ್ರಿಲ್ 15ರಂದು 100 ಕೈದಿಗಳನ್ನು, ಏಪ್ರಿಲ್ 22 ರಂದು 100 ಮಂದಿಯನ್ನು ಮತ್ತು ಕೊನೆಯ ಹಂತವಾಗಿ ಏಪ್ರಿಲ್ 29ರಂದು 60 ಕೈದಿಗಳನ್ನು ಬಿಡುಗಡೆಗೊಳಿಸುವುದಾಗಿ ಪಾಕಿಸ್ತಾನ ತಿಳಿಸಿದೆ.
‘ಸೌಹಾರ್ದತೆಯ ಸಂಕೇತವಾಗಿ ಭಾರತೀಯರನ್ನು ಬಿಡುಗಡೆ ಗೊಳಿಸಲಾಗಿದೆ. ಭಾರತವೂ ಇದೇ ರೀತಿ ನಮ್ಮೊಂದಿಗೆ ಕೈಜೋಡಿಸಲಿದೆ ಎಂಬ ಭರವಸೆ ಇದೆ’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ತಿಳಿಸಿದ್ದಾರೆ.
ಪ್ರಸ್ತುತ ಭಾರತದ ಜೈಲಿನಲ್ಲಿ ಪಾಕಿಸ್ತಾನದ 347 ಕೈದಿಗಳು ಮತ್ತು ಪಾಕಿಸ್ತಾನದ ಜೈಲಿನಲ್ಲಿ ಭಾರತದ 537 ಕೈದಿಗಳು ಇದ್ದಾರೆ.
ಅರೇಬಿಯನ್ ಸಮುದ್ರದಲ್ಲಿ ಗಡಿಯನ್ನು ಸ್ಪಷ್ಟವಾಗಿ ಗುರುತಿಸಿಲ್ಲದ ಕಾರಣ, ಉಭಯ ದೇಶಗಳ ಮೀನುಗಾರರು ಆಗಾಗ ಮತ್ತೊಂದು ದೇಶದ ಜಲಗಡಿಯೊಳಗೆ ಮೀನುಗಾರಿಕೆಗಾಗಿ ತೆರಳಿ, ಬಂಧಿತರಾಗುವುದು ಸಾಮಾನ್ಯವಾಗಿದೆ.
ಪುಲ್ವಾಮಾ ದಾಳಿಯ ನಂತರ ಎರಡೂ ದೇಶಗಳ ನಡುವೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಾಕಿಸ್ತಾನ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.